ಜಪಾನೀ ವಾಸ್ತು -
 	ಜಪಾನಿನಲ್ಲಿ ವಾಸ್ತುನಿರ್ಮಾಣಕ್ಕೆ ಬೇಕಾದ ಕಲ್ಲುಗಳು ದೊರಕುವುದಿಲ್ಲ. ಜಪಾನಿನ ಕಾಡುಗಳಲ್ಲಿ ಕಟ್ಟಡಗಳಿಗೆ ಬೇಕಾದ ಮರ ಧಾರಾಳವಾಗಿ ದೊರಕುತ್ತದೆ. ಅಲ್ಲಿಯ ವಾಯುಗುಣ ಮತ್ತು ಕಚ್ಚಾ ಸಾಮಗ್ರಿಯ ಪ್ರಭಾವಗಳನ್ನು ಜಪಾನೀ ವಾಸ್ತುನಿರ್ಮಾಣಗಳಲ್ಲಿ ಪುರಾತನ ಕಾಲದಿಂದಲೂ ಕಾಣಬಹುದಾಗಿದೆ. ಅಲ್ಲಿಯ ಕಟ್ಟಡಗಳು ಸಾಮಾನ್ಯವಾಗಿ ಬೇಸಗೆಯ ಬೇಗೆಯನ್ನು ತಡೆಯುವ ಸಲುವಾಗಿ ಕಟ್ಟಿದವು. ಕಟ್ಟಡಗಳ ನಿರ್ಮಾಣ ಯೋಜನೆಯಲ್ಲಿ ಗಾಳಿ ಬೆಳಕುಗಳು ಬರುವುದಕ್ಕೆ ಅನುಕೂಲಕರವಾಗಿರುವಂತೆ ನೆಲಗಟ್ಟಿನಿಂದ ಚಾವಣಿಯವರೆಗೂ, ಒಂದು ಕಂಬದಿಂದ ಮತ್ತೊಂದು ಕಂಬದ ವರೆಗೂ ಪ್ರಸರಿಸಿರುವ ಬಾಗಿಲು ಕಿಟಕಿಗಳು ಪ್ರಧಾನವಾಗಿವೆ. ಅರ್ವಾಚೀನ ಯುಗದವರೆಗೂ ಕಟ್ಟಡಗಳಿಗೆ ಮರದ ಸಾಮಗ್ರಿಗಳನ್ನು ಮಾತ್ರ ಉಪಯೋಗಿಸುತ್ತಿದ್ದುದರಿಂದ, ಕಂಬ ಮತ್ತು ಅಡ್ಡ ತೊಲೆಗಳು ಕಟ್ಟಡಗಳ ಪ್ರಮುಖ ಅಂಗಗಳಾಗಿದ್ದು, ಗೋಡೆಗಳು ಕೇವಲ ತಡಿಕೆಗಳಾಗಿದ್ದುವೆ ಹೊರತು ಚಾವಣೆಯ ಭಾರವನ್ನು ಹೊರುವ ಸಾಧನಗಳಾಗಿರಲಿಲ್ಲ.

ಜಪಾನೀ ವಾಸ್ತುನಿರ್ಮಾಣಗಳು ಇತರ ದೇಶಗಳ ವಾಸ್ತುನಿರ್ಮಾಣಗಳಿಗಿಂತ ಪ್ರತ್ಯೇಕವಾದ ಲಕ್ಷಣಗಳನ್ನು ಪ್ರದರ್ಶಿಸುತ್ತವೆ. ಕಂಬ ಮತ್ತು ಕಟ್ಟಡಗಳಲ್ಲಿ ಜ್ಯಾಮಿತೀಯ ಆಕಾರಗಳು ಪ್ರಮುಖವಾಗಿವೆ. ಅಲ್ಪಕಾಲಾವಧಿಯಲ್ಲಿ ಅವು ನಾಶವಾಗುತ್ತಿದ್ದುವಲ್ಲದೆ ಬೆಂಕಿಗೆ ತುತ್ತಾಗುವ ಭಯವೂ ಅಧಿಕವಾಗಿತ್ತು. ಅವು ಬಹುವಾಗಿ ತೆರೆದಿರುತ್ತಿದ್ದುದರಿಂದ ಒಳಭಾಗಕ್ಕಿಂತಲೂ ಹೊರಭಾಗದ ಸೌಂದರ್ಯಕ್ಕೆ ಹೆಚ್ಚು ಗಮನ ಕೊಡಲಾಗುತ್ತಿತ್ತು. ಮರದ ಸಾಮಗ್ರಿಗಳಿಂದ ನಿರ್ಮಿತವಾಗಿರುತ್ತಿದ್ದ ಆ ಕಟ್ಟಡಗಳು ಸುತ್ತಣ ಪ್ರಕೃತಿಯಲ್ಲಿರುವ ಹಸಿರು ಗಿಡಮರಗಳೊಂದಿಗೆ ಸಮ್ಮಿಳಿತವಾಗಿದ್ದುವು. ಕಡೆಯ ಎರಡು ಕಾರಣಗಳಿಂದಾಗಿ ಜಪಾನೀ ಕಟ್ಟಡಗಳ ಸುತ್ತಮುತ್ತ ಪ್ರಾಕೃತಿಕ ಸೊಬಗಿನಿಂದ ಕೂಡಿದ ಉದ್ಯಾನಗಳನ್ನು ಬೆಳೆಸುವುದು ಸಾಮಾನ್ಯವಾಯಿತು.

ಜಪಾನಿನ ವಾಸ್ತುಕಲೆಯಲ್ಲಿ ಅಸಮ ಪ್ರಮಾಣದ ತಳಹದಿಯುಳ್ಳ ಕಟ್ಟಡಗಳೇ ಹೆಚ್ಚು. ಈ ಲಕ್ಷಣ ಚೀನಿ ಪ್ರಭಾವದಿಂದ ಬಂದದ್ದಾದರೂ ಕಟ್ಟಡದ ವಿವಿಧ ಅಂಗಗಳು ಒಂದರಲ್ಲೊಂದು ಮಿಳಿತವಾಗಿ ಸೇರಿಕೊಂಡಿರುವಂತೆ ಕಾಣುತ್ತವೆ.
ಈಚೆಗೆ ಜಪಾನಿನಲ್ಲಿ ನಡೆದ ಪುರಾತತ್ವ ಶೋಧನೆಗಳಿಂದ ಕ್ರಿ.ಪೂ. 8000ದ ಸುಮಾರಿನಲ್ಲಿ ಅಲ್ಲಿ ಮಾನವ ಮೊಟ್ಟಮೊದಲು ಕಾಣಿಸಿಕೊಂಡನೆಂದು ತಿಳಿದುಬಂದಿದೆ. ಆದರೂ ಅತ್ಯಂತ ಪ್ರಾಚೀನ ವಾಸ್ತುನಿರ್ಮಾಣಗಳ ಕುರುಹುಗಳು ಕಾಣಸಿಗುವುದು ಕ್ರಿ.ಪೂ. 3000ದ ಸುಮಾರಿನಲ್ಲಿ ಪ್ರಾರಂಭವಾದ ನವಶಿಲಾಯುಗಕ್ಕೆ ಸೇರಿದ ಜೊಮೊನ್ ಸಂಸ್ಕøತಿಯ ಕಾಲದಿಂದ ಮಾತ್ರ. ಅನೇಕ ಪ್ರಾಕ್ತನ ನೆಲೆಗಳಿಂದ ತಿಳಿದುಬಂದಿರುವ ಪ್ರಕಾರ ಆ ಕಾಲದ ಜನರು 15-16 ಉದ್ದದ, 10-12 ಅಗಲದ ಮತ್ತು ಭೂಮಟ್ಟದಿಂದ 3 ಆಳ ಇರುತ್ತಿದ್ದ ಗುಂಡಿಮನೆಗಳನ್ನು ನಿರ್ಮಿಸಿಕೊಂಡು ಅವುಗಳಲ್ಲಿ ವಾಸಿಸುತ್ತಿದ್ದರು. ಗುಂಡಿಗಳ ಎರಡು ತುದಿಗಳಲ್ಲಿ ಮರದ ದಿಮ್ಮಿಗಳಿಂದ ಮುಕ್ಕಾಲಿನ ಕಂಬಗಳನ್ನು ನಿರ್ಮಿಸಿ, ಅಂಥ ಕಂಬಗಳ ಮೇಲೆ ಬೆನ್ನುತೊಲೆಯನ್ನು ಇಡುತ್ತಿದ್ದರು. ಬೆನ್ನುತೊಲೆಯನ್ನು ಆಧರಿಸಿದ್ದ, ಗುಂಡಿಯ ಅಂಚಿನವರೆಗೆ ಇಳಿಜಾರಾಗಿ ಬರುತ್ತಿದ್ದ ಅಡ್ಡತೊಲೆಗಳನ್ನು ಜೋಡಿಸಲಾಗುತ್ತಿತ್ತು. ಗೋಡೆ, ಚಾವಣಿ ಎರಡರ ಕೆಲಸವನ್ನೂ ನಿರ್ವಹಿಸುತ್ತಿದ್ದ ಹುಲ್ಲಿನ ಹೊದಿಕೆಯನ್ನು ಅವುಗಳ ಮೇಲೆ ಹಾಕಲಾಗುತ್ತಿತ್ತು. ಕೆಲವೊಂದು ಬಾರಿ ಇಂಥ ಇಳಿಜಾರು ಚಾವಣಿಯನ್ನು ಮೊದಲಿನ ಗುಡಿಸಿಲ ಚಾವಣಿಗೆ ಆಧಾರವಾಗಿರುವಂತೆ ಒಳಭಾಗದಲ್ಲಿ ನಿರ್ಮಿಸಿ ಮೇಲಿನ ಚಾವಣಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿತ್ತು. ಸಾಮಾನ್ಯವಾಗಿ ಇಂಥ ಗುಂಡಿಮನೆಗಳು ಪ್ರವಾಹಗಳಿಂದ ನಿರ್ಮಿತವಾದ ಬಯಲು ಪ್ರದೇಶಗಳಲ್ಲಿ ನಿರ್ಮಿತವಾಗಿರುತ್ತಿದ್ದುವು. ಮನೆಗಳ ನೆಲಗಟ್ಟು ಗಟ್ಟಿಸಿದ ಮಣ್ಣಿನದಾಗಿರುತ್ತಿತ್ತು. ಅದರ ಮಧ್ಯಭಾಗದಲ್ಲಿ ಒಲೆ ಇರುತ್ತಿತ್ತು. ಒಲೆಯ ಸುತ್ತಲ ಸ್ಥಳಕ್ಕೆ ಕಲ್ಲುಗಳನ್ನು ಹಾಸಿರಲಾಗುತ್ತಿತ್ತು. ಚಾವಣಿಯ ಎರಡು ತುದಿಗಳಲ್ಲಿ ಸೂರುಗಳನ್ನು ತೆರವಾಗಿ ಬಿಟ್ಟಿರುತ್ತಿದ್ದುದರಿಂದ ಹೊಗೆ ಹೋಗಲು ಅನುಕೂಲವಾಗಿರುತ್ತಿತ್ತು. ಕಾಲಕ್ರಮದಲ್ಲಿ ಆ ಗುಂಡಿಮನೆಗಳ ನಿರ್ಮಾಣದಲ್ಲಿ ಸುಧಾರಣೆಯಾಯಿತು; ಅನಂತರಕಾಲದ ಜಪಾನಿನ ಹೊಲಮನೆಯಂತೆ ಅವನ್ನು ಕಟ್ಟಲಾಗುತ್ತಿತ್ತು. ಕ್ರಿ.ಶ. 7-8ನೆಯ ಶತಮಾನಗಳವರೆಗೂ ಗುಂಡಿಮನೆಗಳು ನಿರ್ಮಿತವಾಗುತ್ತಿದ್ದುವು.

ವ್ಯವಸಾಯ ಮುಖ್ಯ ವೃತ್ತಿಯಾಗಿದ್ದ ಯಯೋಇ ಸಂಸ್ಕøತಿಯ ಜನರು ಕ್ರಿಸ್ತ ಶಕದ ಆರಂಭದೊಂದಿಗೆ ಕಾಣಿಸಿಕೊಂಡರು. ಅದರೊಂದಿಗೆ ತಲೆದೋರಿದ ಶ್ರೀಮಂತ ವರ್ಗದವರು ವಾಸ್ತು ನಿರ್ಮಾಣದಲ್ಲಿ ಕೆಲವು ಸುಧಾರಣೆಗಳನ್ನು ಮಾಡಿದರು. ಆ ಕಾಲದಲ್ಲಿ ಗುಂಡಿಮನೆಗಳೊಂದಿಗೆ ನೆಲಮಟ್ಟದಲ್ಲಿ ಮತ್ತು ಭೂಮಟ್ಟದಿಂದ ಎತ್ತರದಲ್ಲಿ ಚೂಪುಗಂಬಗಳ ಮೇಲಿನ ವಾಸಗೃಹಗಳು ನಿರ್ಮಾಣವಾದುವು. ಅವೆರಡೂ ಬಗೆಯ ಮನೆಗಳ ನೆಲಗಟ್ಟು ಮತ್ತು ಗೋಡೆಗಳನ್ನು ಮರದಿಂದ ಮಾಡಲಾಗುತ್ತಿತ್ತು. ಯಯೋಇ ಸಂಸ್ಕøತಿಯ ಆದಿಕಾಲದ ಕಂಚಿನ ಮತ್ತು ಮಣ್ಣಿನ ಪಾತ್ರೆಗಳ ಮೇಲೆ ಕಾಣುವ ರೇಖಾಚಿತ್ರಗಳಿಂದಲೂ ಸ್ವಲ್ಪ ಅನಂತರದ ಕಾಲದಿಂದ ದೊರಕುವ ಜೇಡಿಮಣ್ಣಿನ ಪ್ರತಿಕೃತಿಗಳಿಂದಲೂ ಆ ಮನೆಗಳ ರೂಪ ರೇಷೆಗಳನ್ನು ತಿಳಿದುಕೊಳ್ಳಬಹುದು.
ಚೂಪುಗಂಬಗಳ ಮೇಲೆ ನೆಲಗಟ್ಟಿರುವ ವಾಸಗೃಹಗಳಿಂದ ಯಯೋಇ ಜನ ದಕ್ಷಿಣ ದಿಕ್ಕಿನಿಂದ ಬಂದವರಿರಬಹುದೆಂದು ಊಹಿಸಬಹುದಾಗಿದೆ. ತೇವದಿಂದ ಧಾನ್ಯಗಳನ್ನು ರಕ್ಷಿಸುವ ಉದ್ದೇಶದಿಂದ ಬಹುಶಃ ಮೊದಮೊದಲು ನಿರ್ಮಿಸುತ್ತಿದ್ದಿರಬಹುದಾದ ಈ ಮಾದರಿಯ ವಾಸಗೃಹಗಳು ಇತ್ತೀಚಿನ ವರೆಗೆ ಶ್ರೀಮಂತವರ್ಗದವರ ವಾಸಕ್ಕೆ ಮೀಸಲಾಗಿದ್ದುವು.

ಯುಯೋಇ ಕಾಲದಲ್ಲಿ ಜಪಾನಿನಾದ್ಯಂತ ಅನೇಕ ಸಣ್ಣಪುಟ್ಟ ಸ್ವತಂತ್ರ ರಾಜ್ಯಗಳು ತಲೆದೋರಿದುವು. ತಮ್ಮ ತಮ್ಮಲ್ಲಿ ಹೋರಾಡುತ್ತಿದ್ದ ಈ ಗುಂಪುಗಳಲ್ಲಿ ಒಂದು ಗುಂಪು ಯಾಮಾಟೋ ಬಯಲುಪ್ರದೇಶದಲ್ಲಿ ಆಳುತ್ತಿದ್ದು, ಕ್ರಮೇಣ ಇಡೀ ದೇಶವನ್ನು ವಶಪಡಿಸಿಕೊಂಡಿತು. ಮೃತರಾದ ದೊರೆಗಳ ಗೌರವಾರ್ಥ 4-5ನೆಯ ಶತಮಾನಗಳಲ್ಲಿ ಈಜಿಪ್ಟಿನ ಪಿರಮಿಡ್ಡುಗಳನ್ನು ಹೋಲುವ, ಮಣ್ಣಿನ ದೊಡ ದಿಬ್ಬಗಳನ್ನು ಮಾಡಲಾಗುತ್ತಿತ್ತು.

ವಾಸ್ತುಶೈಲಿಯ ದೃಷ್ಟಿಯಿಂದ ಜಪಾನಿನ ಪ್ರಾಚೀನತಮ ನಿರ್ಮಾಣಗಳಲ್ಲಿ ಇಜûೂಮೋ ಮತ್ತು ಈಸೇಯ ದೇವಾಲಯಗಳು ಮುಖ್ಯವಾದವು. ಇವೆರಡೂ ಚೂಪುಗಂಬಗಳ ಮೇಲೆ ನೆಲಗಟ್ಟುಳ್ಳ, ಗೇಬಲ್ ಆಕಾರದ ಚಾವಣಿಗಳುಳ್ಳ, ಮರದ ಕಟ್ಟಡಗಳು, ಇವುಗಳಲ್ಲಿ ಹಳೆಯದೆಂದು ಪರಿಗಣಿತವಾಗಿರುವ ಇಜûೂಮೋ ಮಂದಿರದಲ್ಲಿ ಜಪಾನೀ ಪುರಾಣಗಳಿಗೆ ಅನುಗುಣವಾಗಿ ಸೂರ್ಯ ಸ್ತ್ರೀದೇವತೆಯ ಸಹೋದರನ ಮಗ ಓನಮೋಚಿ ದೇವನನ್ನು ಪೂಜಿಸಲಾಗುತ್ತದೆ. ಆ ದೇವಾಲಯದ ಈಗಿನ ಕಟ್ಟಡವನ್ನು 1744ರಲ್ಲಿ ಪುನರ್ನಿರ್ಮಿಸಲಾಗಿದ್ದರೂ ಜಪಾನಿನ ಪ್ರಾಚೀನ ಷಿಂಟೋ ಮತದ ಸಂಪ್ರದಾಯದಂತೆ ಪ್ರತಿ ಇಪ್ಪತ್ತು ವರ್ಷಗಳಿಗೊಮ್ಮೆ ಈ ಮಂದಿರಗಳನ್ನು ಚಾಚೂ ತಪ್ಪದಂತೆ ಮೊದಲಿನ ಆಕಾರದಲ್ಲಿ ಪುನಃ ಕಟ್ಟುತ್ತಿದ್ದರೆಂದು ಹೇಳಲಾಗಿದೆ. ಆದ್ದರಿಂದ ಈಗಿನ ಕಟ್ಟಡ ಪ್ರಾಚೀನತಮ ಇಜûೂಮೋ ಮಂದಿರದ ವಾಸ್ತುಲಕ್ಷಣ ಮತ್ತು ಪ್ರಮಾಣಗಳನ್ನು ಉಳಿಸಿಕೊಂಡು ಬಂದಿದೆಯೆಂದು ನಂಬಲಾಗಿದೆ. ಆದ್ದರಿಂದ ಈಗಿನ ಕಟ್ಟಡ ಪ್ರಾಚೀನತಮ ಇಜûೂಮೋ ಮಂದಿರದ ವಾಸ್ತುಲಕ್ಷಣ ಮತ್ತು ಪ್ರಮಾಣಗಳನ್ನು ಉಳಿಸಿಕೊಂಡು ಬಂದಿದೆಯೆಂದು ನಂಬಲಾಗಿದೆ. ಆದರೆ 10ನೆಯ ಶತಮಾನದ ಆಧಾರಗಳಿಂದ ಆಗಿನ ಕಟ್ಟಡದ ಎತ್ತರ 160 ಎಂದು ತಿಳಿದುಬರುತ್ತದೆ. 1744ರಲ್ಲಿ ಪುನರ್ರಚಿತವಾದಾಗ ಕಟ್ಟಡದ ಎತ್ತರ ಸು. 80 ಆಯಿತು. ಸಮಾನಾಂತರಗಳಲ್ಲಿರುವ ಒಂಬತ್ತು ಕಂಬಗಳುಳ್ಳ ಚಚ್ಚೌಕನಾದ ಈ ಮಂದಿರದ ಪ್ರವೇಶದ್ವಾರ ಒಂದು ತುದಿಯ ಗೇಬಲ್ಲಿನ ಕೆಳಗಿದೆ. ಚಾವಣಿಯ ಸುತ್ತಲೂ ಮೊಗಸಾಲೆಯಂತೆ ಭೂಮಟ್ಟದಿಂದ ಇಕ್ಕಟ್ಟಾಗಿರುವ ಸೋಪಾನ ಪಂಕ್ತಿಯ ಮೂಲಕ ಅದನ್ನು ಪ್ರವೇಶಿಸಬೇಕಾಗುತ್ತದೆ. ಮಂದಿರದ ಒಳಮಧ್ಯಭಾಗದಲ್ಲಿ ಒಂದು ಕಂಬವಿದೆ. ಆ ಕಂಬದಿಂದ ಬಲಬದಿಯ ಗೋಡೆಯವರೆಗೆ ಇರುವ ಅಡ್ಡಗೋಡೆಯ ಹಿಂದೆ ಗರ್ಭಗೃಹವಿದೆ. ಇದೇ ಮಾದರಿಯ ಮತ್ತೆ ಕೆಲವು ನಿರ್ಮಾಣಗಳನ್ನು ಜಪಾನಿನ ಕೆಲವು ಪ್ರದೇಶಗಳಲ್ಲಿ ಕಾಣಬಹುದು.
ಜಪಾನಿನ ವಾಸ್ತುನಿರ್ಮಾಣಗಳ ಮುಂದಿನ ಹಂತವನ್ನು ಸೂಚಿಸುವ ಈಸೇಯ ಮಂದಿರ ಆಯಾಕಾರವಾದ್ದು. ಇದು ಮೂರಂಕಣ ಉದ್ದ ಮತ್ತು ಎರಡಂಕಣ ಅಗಲವಾಗಿದೆ. ಇದರ ಪ್ರವೇಶದ್ವಾರ ಉದ್ದವಾದ ಒಂದು ಪಾಶ್ರ್ವದಲ್ಲಿದೆ. 3ನೆಯ ಶತಮಾನದಲ್ಲಿದ್ದ ಒಬ್ಬ ಚಕ್ರವರ್ತಿಯ ಆಶ್ರಯದಲ್ಲಿ ಇದನ್ನು ನಿರ್ಮಿಸಲಾಯಿತೆಂದು ತಿಳಿದುಬರುತ್ತದೆ. ಇದೇ ಮಾದರಿಯ ಮತ್ತೊಂದು ಮಂದಿರವನ್ನು 5ನೆಯ ಶತಮಾನದಲ್ಲಿ ನಿರ್ಮಿಸಲಾಯಿತೆಂದು ಹೇಳಲಾಗಿದೆ. ಸಂಪ್ರದಾಯದಂತೆ 20 ವರ್ಷಗಳಿಗೊಮ್ಮೆ ಪುನರ್ನಿರ್ಮಿತವಾಗುವ ಈ ಮಂದಿರಗಳೂ ತಮ್ಮ ಮೊದಲಿನ ರೂಪರೇಷೆಗಳನ್ನು ಉಳಿಸಿಕೊಂಡು ಬಂದಿವೆಯೆಂದು ನಂಬಲಾಗಿದೆ. 1953ರಲ್ಲಿ ಇದನ್ನು 59ನೆಯ ಬಾರಿಗೆ ಪುನಃ ನಿರ್ಮಿಸಲಾಗಿದೆ.

ಇಜûೂಮೋ ಮಂದಿರಗಳಿಗಿಂತ ಈಸೇಯ ಮಂದಿರಗಳು ಹೆಚ್ಚು ಸುಂದರ. ಅವುಗಳ ಮೇಲೆ ಚೀನೀ ಪ್ರಭಾವ ಕಂಡುಬರುತ್ತವೆ. ಅವುಗಳ ಆಕಾರದಲ್ಲಿ ಎದ್ದು ಕಾಣುವ ಅಂಶವೆಂದರೆ ಘನವಾದ ಗೇಬಲ್ ಚಾವಣಿ. ಎರಡು ತುದಿಗಳಲ್ಲಿ ಗೇಬಲ್ ಸೂರುಗಳು ಗೋಡೆಗಳಿಗಿಂತ ಮುನ್‍ಚಾಚಿವೆ. ಚಾವಣಿಯ ಬೆನ್ನುತೊಲೆಗೆ ಆಧಾರವಾಗಿ ನಿಲ್ಲಿಸಲಾದ ಎರಡು ಕಂಬಗಳ ತುದಿಗಳು ಚಾವಣಿಯ ಮೇಲೆ ಎದ್ದುನಿಂತಿವೆ. 685ರ ಪುನರ್ನಿರ್ಮಾಣದ ಅನಂತರ ಅದರ ಆಕಾರದಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಿದಂತೆ ಕಾಣುವುದಿಲ್ಲ.

ಕೊರಿಯದ ಪೆಕ್‍ಚೆ ರಾಜ್ಯದ ದೊರೆ 6ನೆಯ ಶತಮಾನದ ಮಧ್ಯಭಾಗದಲ್ಲಿ ಜಪಾನಿನ ದೊರೆಗೆ ಬೌದ್ಧ ಪ್ರತಿಮೆಗಳನ್ನೂ ಪವಿತ್ರ ಗ್ರಂಥಗಳನ್ನೂ ಕಳಿಸಿಕೊಟ್ಟ ತರುವಾಯದ ಎರಡು ಶತಮಾನಗಳಲ್ಲಿ ಬೌದ್ಧಧರ್ಮ ತನ್ನ ವಾಸ್ತು ಮತ್ತು ಶಿಲ್ಪಕಲೆಗಳೊಂದಿಗೆ ಜಪಾನಿನಲ್ಲಿ ಪ್ರಬಲವಾಗಿ ತಳವೂರಿತು. ಚೀನ ಮತ್ತು ಕೊರಿಯ ಭೂಭಾಗಗಳಿಂದ ಅಧಿಕ ಸಂಖ್ಯೆಯಲ್ಲಿ ಬೌದ್ಧಭಿಕ್ಷುಗಳೂ ಕಲಾಕಾರರೂ ಜಪಾನಿಗೆ ಬಂದು ಅಲ್ಲಿಯವರಿಗೆ ಆ ಧರ್ಮ ಮತ್ತು ಸಾಂಸ್ಕøತಿಕ ವಿಷಯಗಳ ಪರಿಚಯ ಮಾಡಿಕೊಟ್ಟರು. 593ರ ಅನಂತರ ರಾಜಪ್ರತಿನಿಧಿಯಾದ ಬೌದ್ಧ ಮತಾನುಯಾಯಿ ಷೋಟೊಕು ರಾಜಕುಮಾರನ ಆಶ್ರಯದಲ್ಲಿ ಚೀನೀ ಸಂಪ್ರದಾಯದ ಬೌದ್ಧಮಂದಿರಗಳು ಜಪಾನಿನಲ್ಲಿ ನಿರ್ಮಾಣವಾದುವು. ಅದರ ಪರಿಣಾಮವಾಗಿ 624ರ ವೇಳೆಗೆ 816 ಭಿಕ್ಷುಗಳಿಗೆ ಮತ್ತು 569 ಭಿಕ್ಷುಣಿಯರಿಗೆ ಆಶ್ರಯ ನೀಡುವ 46 ವಿಹಾರಗಳು ನಿರ್ಮಿತವಾದುದಾಗಿ ತಿಳಿದುಬರುತ್ತದೆ.

ಷೋಟೊಕು 7ನೆಯ ಶತಮಾನದಲ್ಲಿ ಕಟ್ಟಿಸಿದ ಹೊರ್ಯೂಜಿ ಇಂಥ ನಿರ್ಮಾಣಗಳಲ್ಲಿ ಮುಖ್ಯವಾದ್ದು. 670ರಲ್ಲಿ ಬೆಂಕಿಗೆ ಆಹುತಿಯಾದ ಆ ಮಂದಿರವನ್ನು ಪುನಿರ್ಮಿಸಿದ್ದರೂ 552-645ರ ಕಾಲಕ್ಕೆ ಸೀಮಿತವಾದ ಆಸೂರಾ ಯುಗದ ಶೈಲಿಗೆ ಅದನ್ನು ನಿರ್ದೇಶಿಸಲಾಗಿದೆ. ಹೊರ್ಯೂಜಿಯ ಪ್ರಮುಖ ಭಾಗಗಳೆಂದರೆ ಎರಡು ಅಂತಸ್ತುಗಳ ಮಧ್ಯ ಹಜಾರ ಮತ್ತು ಐದು ಅಂತಸ್ತುಗಳ ಪಗೋಡ. ವಿಶಾಲವಾದ ಪ್ರಕಾರದಲ್ಲಿ, ಅಂಗಳಗಳಿಂದ ಸುತ್ತವರಿಯಲ್ಪಟ್ಟ ಈ ಹಜಾರ ಮತ್ತು ಪಗೋಡಗಳು ಅಕ್ಕಪಕ್ಕದಲ್ಲಿ ನಿಂತಿವೆ. ಇವನ್ನು ಮರದಿಂದ ಸುಭದ್ರವಾಗಿ ನಿರ್ಮಿಸಲಾಗಿದೆ. ಹೆಂಚಿನ ಚಾವಣಿಯುಳ್ಳ ಮಧ್ಯ ಹಜಾರ ಆಯಾಕಾರವಾದ್ದು. ಅದರ ಕೆಳಗಿನ ಅಂತಸ್ತಿನ ಸುತ್ತ ಅಂಗಳವಿದೆ. ಮೇಲಣ ಅಂತಸ್ತಿನ ಸುತ್ತ ಸ್ವಸ್ತಿಕದ ಆಕಾರದ ಕಟಕಟೆ ಇದೆ. ಬಹಳ ಉದ್ದವಾಗಿರುವ ಸೂರುಗಳಿಗೆ ಕಂಬಗಲ ಮೇಲಿನ ವಿಶಿಷ್ಟ ರೀತಿಯ ಕಂಸಗಳ ಆಧಾರಗಳಿವೆ.

ಈ ಕಟ್ಟಡದ ಮಧ್ಯಭಾಗದಲ್ಲಿರುವ ವೇದಿಕೆಯ ಮೇಲೆ ಪರಿವಾರದೇವತೆಗಳು ಮತ್ತು ದಿಕ್ಪಾಲಕರಿಂದ ಸುತ್ತುವರಿಯಲ್ಪಟ್ಟ ಶಾಕ್ಯಮುನಿ ಬುದ್ಧನ ವಿಗ್ರಹವನ್ನು ಪ್ರತಿಷ್ಠಿಸಲಾಗಿದೆ. ಒಳಮಂದಿರದ ಸುತ್ತಣ ಅಂಗಳಗಳ ಮೂಲಕ ಪ್ರದಕ್ಷಿಣೆ ಮಾಡಲು ಮಾರ್ಗವನ್ನು ನಿರ್ಮಿಸಲಾಗಿತ್ತು.

ಇತರ ಜಪಾನೀ ಪಗೋಡಗಳಂತೆ ಹೊರ್ಯೂಜಿ ಪಗೋಡ ಕೂಡ ಸ್ಮಾರಕ ಮಂದಿರವಾಗಿತ್ತು. ಕೆಳಗಿನ ಅಂತಸ್ತಿನಲ್ಲಿ ಬುದ್ಧನ ಜಾತಕ ಕಥೆಗಳ ನಿರೂಪಣೆಯಿತ್ತು. ಅದರ ಮೇಲಣ ಅಂತಸ್ತುಗಳನ್ನು ಮಂದಿರದ ಎತ್ತರವನ್ನು ಹೆಚ್ಚಿಸುವ ಸಲುವಾಗಿ ಬಲವಾದ ಮರದ ಕಂಬತೊಲೆಗಳಿಂದ ಭದ್ರವಾಗಿ ನಿರ್ಮಿಸಲಾಗಿತ್ತು. ಮಂದಿರದ ಮಧ್ಯದಲ್ಲಿ ಅಡಿಪಾಯದಿಂದ ತುದಿಯ ಶಿಖರದವರೆಗೂ ಅಖಂಡವಾದ ಒಂದು ದೊಡ್ಡ ಮರದ ಕಂಬ ಕಟ್ಟಡಕ್ಕೆ ಆವಶ್ಯಕವಾದ ಹಿಡಿತವನ್ನು ಒದಗಿಸಿತ್ತು. ನಿರ್ಮಾಣತಂತ್ರದಲ್ಲೂ ಹೊರ್ಯೂಜಿ ಪಗೋಡ ಗಮನಾರ್ಹವಾದ ಕಟ್ಟಡ. ಕೆಳಗಿನ ಪ್ರತಿಯೊಂದು ಅಂತಸ್ತೂ ತನ್ನ ಮೇಲಿನ ಅಂತಸ್ತಿಗೆ ಭದ್ರವಾದ ಅಡಿಪಾಯದಂತೆ ನಿರ್ಮಿತವಾಗಿರುತ್ತಿತ್ತು. ಮಧ್ಯ ಹಜಾರದ ರೀತಿಯಲ್ಲಿ ಈ ಕಟ್ಟಡವೂ ಮೂರಂತಸ್ತಿನದಾಗಿತ್ತು. ಕೆಳಗಿನ ಅಂತಸ್ತಿನ ಸೂತ್ತಲೂ ದೀರ್ಘವಾದ ಸೂರುಗಳುಳ್ಳ ಚಾವಣಿಯಿದ್ದ ಅಂಗಳಗಳಿದ್ದುವು. ಮೇಲಣ ಅಂತಸ್ತುಗಳು ಕೆಳಗಿನವುಗಳಿಗಿಂತ ಸ್ಪಲ್ಪ ಸಣ್ಣವಾಗಿರುತ್ತಿದ್ದುವು.

ಕಟಕಟೆಗಳು, ಸೂರುಗಳಿಗೆ ಆಧಾರವಾದ ಕಂಸಗಳು ಮತ್ತು ಇತರ ವಾಸ್ತು ಲಕ್ಷಣಗಳಲ್ಲಿ ಹೊರ್ಯೂಜಿ 5-6ನೆಯ ಶತಮಾನಗಳಲ್ಲಿ ನಿರ್ಮಿತವಾಗಿದ್ದ ಚೀನದ ಯುನ್‍ಕಾಂಗ್ ಮತ್ತು ಲಂಗ್‍ಮೆನ್ ಗುಹಾಮಂದಿರಗಳನ್ನು ಹೋಲುತ್ತವೆ. ಆದರೆ ಬಹುಶಃ ಈ ಚೀನೀಪ್ರಭಾವಗಳು ಕೊರಿಯದ ಮೂಲಕ ಜಪಾನನ್ನು ತಲುಪಿದಂತೆ ಕಾಣುತ್ತದೆ.

ಜಪಾನಿನ ಪ್ರಾಚೀನ ವಾಸ್ತುನಿರ್ಮಾಣಗಳಿಗೂ ಚೀನೀಭೂಭಾಗದಿಂದ ಪ್ರವೇಶಿಸಿದ ವಾಸ್ತುಕಲೆಯ ಪ್ರಭಾವಗಳಿಂದ ಹುಟ್ಟಿಕೊಂಡ ಹೊರ್ಯೂಜಿ ವಾಸ್ತುಶೈಲಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಪ್ರಾಚೀನ ಜಪಾನೀ ವಾಸ್ತು ನಿರ್ಮಾಣಗಳಲ್ಲಿ ಹುಲ್ಲಿನ ಚಾವಣಿಗಳನ್ನು ಉಪಯೋಗಿಸುತ್ತಿದ್ದರೆ ಚೀನೀಪ್ರಭಾವದ ಕಟ್ಟಡಗಳಲ್ಲಿ ಚಾವಣಿಗಳನ್ನು ಹೆಂಚುಗಳಿಂದ ನಿರ್ಮಿಸಲಾಗುತ್ತಿತ್ತು. ಪ್ರಾಚೀನ ಜಪಾನೀ ಕಟ್ಟಡಗಳ ಕಂಬಗಳನ್ನು ಭೂಮಿಯಲ್ಲಿ ನಿಟ್ಟಿರುತ್ತಿದ್ದರೆ ಚೀನೀಪ್ರಭಾವಿತ ನಿರ್ಮಾಣಗಳಲ್ಲಿ ಕಲ್ಲಿನ ತಳಹದಿಯ ಮೇಲೆ ಮರದ ಕಂಬಗಳನ್ನು ನಿಲ್ಲಿಸಲಾಗುತ್ತಿತ್ತು. ಈ ಮಾದರಿಯ ಕಂಬಗಳು ಪಕ್ಕಕ್ಕೆ ವಾಲದಂತೆ ಅಡ್ಡತೊಲೆಗಳನ್ನು ಸಹಾಯಕವಾಗಿ ನಿಲ್ಲಿಸಲಾಗುತ್ತಿತ್ತು. ಮೊದಲಿನ ಕಟ್ಟಡಗಳಲ್ಲಿ ಸರಳವಾದ ಕಂಬ ಮತ್ತು ತೊಲೆಗಳು ಕಟ್ಟಡದ ಮುಖ್ಯ ಆಧಾರಗಳಾಗಿದ್ದರೆ ಅನಂತರದ ಶೈಲಿಯಲ್ಲಿ ಕಂಸಗಳಿಂದ ಕೂಡಿದ ಸೂರುಗಳು ಪ್ರಧಾನವಾದುವು. ಮೊದಲಿನ ಕಟ್ಟಡಗಳ ಮರದ ಭಾಗಗಳು ತಮ್ಮ ನೈಜವರ್ಣದಲ್ಲಿದ್ದರೆ ಹೊರ್ಯೂಜಿ ಕಟ್ಟಡದಲ್ಲಿ ಬಳಸಲಾದ ಮರದ ಭಾಗಗಳು ವಿವಿಧ ಬಣ್ಣಗಳಿಂದಲೂ ಲೋಹಗಳ ಜೋಡಣೆ ಸಾಮಗ್ರಿಗಳಿಂದಲೂ ಅಲಂಕೃತವಾಗಿದ್ದುವು. ಹೊರ್ಯೂಜಿಯ ಮಧ್ಯ ಹಜಾರದ ಗೋಡೆಗಳ ಮೇಲೆ ಭಿತ್ತಿ ಚಿತ್ರಗಳ ಅಲಂಕರಣವನ್ನೂ ಬಳಸಲಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಚೀನೀ ಪ್ರಭಾವದ ನಿರ್ಮಾಣಗಳು ಸುಭದ್ರವಾಗೂ ವಿಶಾಲವಾಗೂ ಇದ್ದುವು. ಅವುಗಳ ನಿರ್ಮಾಣದ ವೆಚ್ಚ ಅಧಿಕವಾಗಿತ್ತು.

7ನೆಯ ಶತಮಾನದಲ್ಲಿ ಚೀನದ ಟಾಂಗ್ ರಾಜವಂಶ ಪ್ರಬಲವಾದಾಗ ಚೀನೀ ಪ್ರಭಾವಗಳು ನೆರೆಹೊರೆಯ ಪ್ರದೇಶಗಳಲ್ಲಿ ಅಧಿಕವಾಗತೊಡಗಿದುವು. ಚೀನ ಮತ್ತು ಜಪಾನುಗಳ ನಡುವೆ ಮೊದಲ ಬಾರಿಗೆ ನೇರ ಸಂಬಂಧಗಳು ಹೆಚ್ಚಿದುವು. 645ರಲ್ಲಿ ಜಪಾನೀ ಆಡಳಿತ ಚೀನೀ ಮಾದರಿಯ ಸಾಂಸ್ಕøತಿಕ ಸುಧಾರಣೆಗಳನ್ನು ಕೈಗೊಂಡದ್ದರಿಂದ ಚೀನೀ ವಾಸ್ತುಕಲೆ ಜಪಾನಿನಲ್ಲಿ ಹೆಚ್ಚಿನ ಪ್ರಭಾವ ಬೀರುವಂತಾಯಿತು. ನಾರಾ ಬಳಿ ಇರುವ ಯಕುಷಿಜಿ ಮಂದಿರದ ಆವರಣದಲ್ಲಿರುವ ಪಗೋಡದಲ್ಲಿ ಈ ಪ್ರಭಾವಗಳು ಎದ್ದು ಕಾಣುತ್ತವೆ. ಚೀನೀ ಆಡಳಿತ ಪದ್ಧತಿಗೆ ಅನುಗುಣವಾಗಿ ಜಪಾನಿನ ರಾಜಧಾನಿಯನ್ನು ಪ್ರತಿ ಚಕ್ರವರ್ತಿಯ ಆಳ್ವಿಕೆಯಲ್ಲೂ ಸ್ಥಳಾಂತರಿಸುತ್ತಿದ್ದ ಪದ್ಧತಿ ನಿಂತುಹೋಯಿತು. ಚೀನೀ ರಾಜಧಾನಿ ಚಾಂಗ್-ಆನ್ ಮಾದರಿಯಲ್ಲಿ ನಾರಾದಲ್ಲಿ ಶಾಶ್ವತ ರಾಜಧಾನಿಯೊಂದು ನಿರ್ಮಿತವಾಯಿತು. ಉತ್ತರ ದಕ್ಷಿಣವಾಗಿ  ಮೈ., ಪೂರ್ವ ಪಶ್ಚಿಮವಾಗಿ  ಮೈ. ಇದ್ದ ಹೊಸನಗರದಲ್ಲಿ ನೇರವೂ ಅಗಲವೂ ಆದ ರಸ್ತೆಗಳನ್ನು ನಿರ್ಮಿಸಲಾಯಿತು. ಉತ್ತರ ಮಧ್ಯಭಾಗದಲ್ಲಿ ರಾಜ ಮನೆತನದ ವಸತಿಗಳನ್ನೂ ಇತರ ಭಾಗಗಳಲ್ಲಿ ಶ್ರೀಮಂತವರ್ಗದವರ ನಿವಾಸಗಳನ್ನೂ ವಿಶಾಲವಾದ ದೇವಮಂದಿರಗಳನ್ನೂ ನಿರ್ಮಿಸಲಾಯಿತು. ನಾರಾ ನಗರ ನಿರ್ಮಾಣಯೋಜನೆ ಮಹತ್ತ್ವದ್ದಾಗಿತ್ತು, ಅದರ ಸಫಲತೆ ಜಪಾನೀ ಸಾರ್ವಭೌಮತ್ವದ ದ್ಯೋತಕವಾಯಿತು.

741ರಲ್ಲಿ ಚಕ್ರವರ್ತಿ ಷೋಮುವಿನ ಅಪ್ಪಣೆಯಂತೆ ಪ್ರತಿಯೊಂದು ಪ್ರಾಂತ್ಯದಲ್ಲೂ ಒಂದೊಂದು ಬೌದ್ಧವಿಹಾರ ಮತ್ತು ಮಠವನ್ನು ನಿರ್ಮಿಸಲಾಯಿತು. 745ರಲ್ಲಿ ಅವನ ಆದೇಶದಂತೆ ರಾಜಧಾನಿ ನಾರಾದಲ್ಲಿ ಜಪಾನೀ ಬೌದ್ಧಧರ್ಮದ ಕೇಂದ್ರವೆಂದು ಪರಿಗಣಿಸಲಾದ ಟೋಡೈಜಿಯ ನಿರ್ಮಾಣವಾಯಿತು. 50,000 ಬಡಗಿಗಳು, 3,70,000 ಲೋಹಶಿಲ್ಪಿಗಳು, 21,80,000 ಕೂಲಿಗಾರರು ದುಡಿಯುತ್ತಿದ್ದ ಮಂದಿರದಲ್ಲಿ ಅಮೋಘವಾದ ಬುದ್ಧಮೂರ್ತಿಯನ್ನು ಪ್ರತಿಷ್ಠಾಪಿಸಲು ಕಟ್ಟಿಸಿದ ಹಜಾರ 290'170' ವಿಸ್ತೀರ್ಣವುಳ್ಳದ್ದಾಗಿಯೂ 156` ಎತ್ತರವಾಗಿಯೂ ಇತ್ತು. ಅದರ ಉತ್ತರಕ್ಕೆ ಉಪನ್ಯಾಸ ಮಂದಿರ ಮತ್ತು ದಕ್ಷಿಣಕ್ಕೆ ಒಂದು ಸಣ್ಣಬಾಗಿಲು ಮತ್ತೊಂದು ಬಹಳ ದೊಡ್ಡ ಹೆಬ್ಬಾಗಿಲು ಇದ್ದುವು. ಆ ಬಾಗಿಲುಗಳ ಮಧ್ಯೆ 300 ಎತ್ತರದ ಎರಡು ಪಗೋಡಗಳು ಇದ್ದುವು. ಬಹುಶಃ ಜಪಾನಿನ ಮರದ ನಿರ್ಮಾಣಗಳಲ್ಲಿ ಈ ಪಗೋಡಗಳೇ ಅತ್ಯಂತ ಎತ್ತರವಾದವು.
ಜಪಾನೀ ಶಿಲ್ಪಿಗಳಿಗೆ ಕಟ್ಟಡಗಳ ಅಡ್ಡಗಲದ ಭದ್ರತೆಯನ್ನು ಹೆಚ್ಚಿಸುವ ಮಾರ್ಗ ಗೊತ್ತಿರಲಿಲ್ಲ. ಆದ್ದರಿಂದ ಇಂಥ ಭಾರವಾದ ಚಾವಣಿಗಳಿಗೆ ಬಹಳ ದಪ್ಪನಾದ ಮರದ ಅಡ್ಡತೊಲೆಗಳನ್ನು ಉಪಯೋಗಿಸುತ್ತಿದ್ದರು. ಆ ಪ್ರಮಾಣದ ಮರದ ತೊಲೆಗಳು ದೊರಕುತ್ತಿದ್ದರೂ ಅವುಗಳ ಸಾಗಣೆ ಬಹಳ ಶ್ರಮಸಾಧ್ಯವಾಗಿತ್ತು. ಕಟ್ಟಡಗಳ ವಿಸ್ತಾರವನ್ನು ಹೆಚ್ಚಿಸಲು ಕಂಸಗಳನ್ನು, ಮುನ್‍ಚಾಚಿದ ಕಮಾನುಗಳನ್ನು ಹೆಚ್ಚಿಗೆ ಬಳಸುತ್ತಿದ್ದರು. ಅನಂತರದ ಕಾಲದಲ್ಲಿ ಅಡ್ಡದಿಮ್ಮಿಯನ್ನು ಆಧರಿಸಿದ್ದ ಕಂಬದ ಮೇಲೆ ಸೂರುಗಳ ಭಾರ ನಿಲ್ಲುವಂತೆ ಮಾಡಿದ್ದುದರಿಂದ ಈ ಕಂಸಗಳು ಮತ್ತು ಮುನ್‍ಚಾಚಿದ ಕಮಾನುಗಳು ಕೇವಲ ಆಲಂಕಾರಿಕ ಅಂಗಗಳಾದುವು.
ಟೋಡೈಜಿ ಗುಂಪಿನ ಕಟ್ಟಡಗಳಲ್ಲಿ ಬಹು ಭಾಗ ನಾಶವಾಗಿದ್ದರೂ ಬುದ್ಧಪ್ರತಿಮೆಯನ್ನು ನಿಲ್ಲಿಸಿರುವ ಹಜಾರವನ್ನು ಮೊದಲಿಗಿಂತ ಸ್ವಲ್ಪ ವಿಶಾಲವಾಗಿ 1705ರಲ್ಲಿ ಪುನಃ ನಿರ್ಮಿಸಲಾಯಿತು. ಅದು ಈಗ ಪ್ರಪಂಚದ ಅತಿ ದೊಡ್ಡ ಮರದ ಕಟ್ಟಡವೆಂದು ಪರಿಗಣಿತವಾಗಿದೆ.

ನಾರಾ ದೊರೆಗಳು ನಿರ್ಮಿಸಿದ ಬೌದ್ಧಮಂದಿರಗಳಲ್ಲಿ ಟೋಡೈಜಿ ಅತ್ಯಂತ ಹಿರಿದಾದುದಾದರೂ ಅದಕ್ಕಿಂತ ಸಣ್ಣವಾದ ಹಲವಾರು ಮಂದಿರಗಳನ್ನು ಅವರು ಸ್ಥಾಪಿಸಿದರು. ಬೌದ್ಧಧರ್ಮಕ್ಕೆ ಅವರು ನೀಡಿದ ಆಶ್ರಯದ ಫಲವಾಗಿ ರಾಜ್ಯದ ಭಂಡಾರ ಬರಿದಾಗಿ, ರಾಜ್ಯ ಬಲಹೀನವಾಯಿತೆಂದು ಹೇಳಲಾಗಿದೆ. ಈ ಕಾರಣದಿಂದ 794ರಲ್ಲಿ ರಾಜಧಾನಿಯನ್ನು ಉತ್ತರದ ಕೀಯೋಟೋಗೆ ವರ್ಗಾಯಿಸಲಾಯಿತು. ನಾರಾ ಮಾದರಿಯಲ್ಲಿ ಹೊಸದೊಂದು ರಾಜಧಾನಿಯನ್ನು ಅಲ್ಲಿ ನಿರ್ಮಿಸಲಾಯಿತು.

9ನೆಯ ಶತಮಾನದ ಪೂರ್ವಾರ್ಧದಲ್ಲಿ ಚೀನೀ-ಜಪಾನೀ ಸಂಬಂಧಗಳಲ್ಲಿ ತಲೆದೋರಿದ ಅಭಿಪ್ರಾಯಭೇದಗಳ ದೆಸೆಯಿಂದ ನೇರ ಸಂಪರ್ಕ ಕಡಿದುಹೋಯಿತು. ಜಪಾನೀ ವಾಸ್ತುಕಲೆ ಆ ವರೆಗಿನ ಬೆಳವಣಿಗೆಗಳನ್ನು ತನ್ನದಾಗಿಸಿಕೊಂಡು ಅಭಿವೃದ್ಧಿಯ ಹೊಸ ಮಾರ್ಗವನ್ನು ಅನುಸರಿಸಲಾರಂಭಿಸಿತು. ಜಪಾನೀ ಸಾಂಪ್ರದಾಯಿಕ ಶೈಲಿ ಪುನಃ ಪ್ರಬಲವಾದರೂ ಆ ವರೆಗೆ ಜಪಾನಿಗೆ ತಲುಪಿದ್ದ ಚೀನೀ ಪ್ರಭಾವಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದರ ಫಲವಾಗಿ ಹೊಸದೊಂದು ಮಿಶ್ರಶೈಲಿ ಬೆಳೆಯಿತು. ನಾರಾ ಪಂಥಗಳ ಮಂದಿರಗಳನ್ನು ನಗರದ ಒಳ ವಲಯದಲ್ಲಿ ಸಮತಟ್ಟಾದ ಪ್ರದೇಶಗಳಲ್ಲಿ ಸಮಪ್ರಮಾಣದ ತಳಹದಿಯ ಮೇಲೆ ನಿರ್ಮಿಸಲಾಗಿದ್ದರೆ ಹೊಸ ಟೆಂಡೈ ಮತ್ತು ಷಿಂಗೋನ್ ಪಂಥಗಳ ಮಂದಿರಗಳನ್ನು ನಗರದ ಹೊರಪ್ರದೇಶಗಳಲ್ಲಿ ಬೆಟ್ಟಗಳ ಮೇಲೆ ಅವುಗಳ ಅಸಮ ಪ್ರಮಾಣಗಳಿಗೆ ಸರಿಹೊಂದುವಂತೆ ನಿರ್ಮಿಸಲಾಗುತ್ತಿತ್ತು. ಆ ಕಾಲದ ಬೌದ್ಧಮಂದಿರಗಳು ಸಣ್ಣವಾಗಿಯೂ ಸರಳವಾಗಿಯೂ ಇರುತ್ತಿದ್ದುವು.

ನಾರಾ ಮಂದಿರಗಳ ಮೂರ್ತಿಗಳು ಮಂದಿರದ ಹೊರಗೆ ನಿಂತ ಭಕ್ತಜನಕ್ಕೆ ಕಾಣುವಂತೆ ಆ ಮಂದಿರಗಳನ್ನು ರೂಪಿಸಲಾಗುತ್ತಿತ್ತು. ಭಕ್ತರು ನಿಲ್ಲುವ ಸ್ಥಳದಲ್ಲಿ ಅವರಿಗೆ ಮಳೆಯಿಂದ ರಕ್ಷಣೆ ಒದಗಿಸಲು ಮಂಟಪವನ್ನು ನಿರ್ಮಿಸುವ ಸಂಪ್ರದಾಯ ಬೆಳೆಯಿತು. ಕ್ರಮೇಣ ಈ ಮಂಟಪ ಮತ್ತು ಮೂರ್ತಿ ಇದ್ದ ಗುಡಿಗಳನ್ನು ಒಂದುಗೂಡಿಸಲಾಯಿತು. ಇದರಿಂದ ಆ ಮಂದಿರಗಳು ಹೆಚ್ಚು ಉದ್ದವಾಗಿ ಒಳಭಾಗ ಮಸಕುಮಸಕಾಗಿ ಇರುವಂತಾಯಿತು. ಟೆಂಡೈ ಮತ್ತು ಷಿಂಗೋನ್ ಪಂಥಗಳ ರಹಸ್ಯಮಯ ವಾತಾವರಣಕ್ಕೆ ಇದು ಅನುಕೂಲಕರವಾಯಿತು.

ಬೌದ್ಧಧರ್ಮದ ಪ್ರಾಬಲ್ಯದಿಂದ ಷಿಂಟೋ ಮತ ನಾಶಗೊಳ್ಳದಿದ್ದರೂ ಅದರಲ್ಲಿ ಅನೇಕ ಬದಲಾವಣೆಗಳಾದುವು. ಷಿಂಟೋ ಪಂಥದ ದೇವತೆಗಳು ಬುದ್ಧನ ಜಪಾನೀ ಅವತಾರಗಳೆಂದು ಬೌದ್ಧಮತ ಪರಿಗಣಿಸಿ 8ನೆಯ ಶತಮಾನದ ವೇಳೆಗೆ ಜಪಾನಿನಲ್ಲಿ ತನ್ನ ಜನಪ್ರಿಯತೆಯನ್ನೂ ಪ್ರಾಬಲ್ಯವನ್ನೂ ದ್ವಿಗುಣಗೊಳಿಸಿಕೊಂಡಿತು. ಬೌದ್ಧ ಮಂದಿರಗಳಲ್ಲಿ ಷಿಂಟೋ ದೇವಾಲಯಗಳೂ ಷಿಂಟೋ ದೇವಾಲಯಗಳಲ್ಲಿ ಬೌದ್ಧ ಮಂದಿರಗಳೂ ನಿರ್ಮಿತವಾದುವು. ಷಿಂಟೋ ಮಂದಿರಗಳು ತಮ್ಮ ವಿಶಿಷ್ಟ ಲಕ್ಷಣಗಳನ್ನು ಉಳಿಸಿಕೊಂಡರೂ ಬೌದ್ಧ ವಾಸ್ತುಶಿಲ್ಪಕ್ಕೆ ಸೀಮಿತವಾಗಿದ್ದ ಡೊಂಕಾದ ಚಾವಣಿ, ಬಣ್ಣಗಳನ್ನು ಲೇಪಿಸಿದ ಹೊರಭಾಗ ಮತ್ತು ಚಾವಣಿಯ ಗೇಬಲ್ಲಿನ ಕೆಳಭಾಗದಲ್ಲಿ ಅಲಂಕರಣ-ಈ ಲಕ್ಷಣಗಳನ್ನು ಅಳವಡಿಸಿಕೊಳ್ಳಲಾರಂಭಿಸಿದುವು.

ಹೊರ್ಯೂಜಿಯ ಉಪನ್ಯಾಸಮಂದಿರ ಮೊದಲು ಒಬ್ಬ ಶ್ರೀಮಂತ ಮಹಿಳೆಯ ವಾಸಗೃಹವಾಗಿತ್ತು. ಆ ಕಾಲದ ಶ್ರೀಮಂತವರ್ಗದವರ ವಾಸಗೃಹಗಳಲ್ಲಿ ಕಂಸಗಳ ಮೇಲೆ ಆಧಾರಿತವಾದ ಸೂರುಗಳು ಮತ್ತು ಡೊಂಕಾದ ಚಾವಣಿಗಳು ಇರುತ್ತಿದ್ದುವೆಂಬುದು ಅದರ ವಾಸ್ತುಲಕ್ಷಣಗಳಿಂದ ತಿಳಿದುಬರುತ್ತದೆ. 9ನೆಯ ಶತಮಾನದ ಕೀಯೋಟೋ ಶ್ರೀಮಂತರ ನಿವಾಸಗಳನ್ನು ಪ್ರಮಾಣಬದ್ಧ ತಳಹದಿಯ ಮೇಲೆ ಒಂದಕ್ಕೊಂದು ಹೊಂದಿಕೊಂಡಂತೆ ಇದ್ದ ಅನೇಕ ಒಳಾಂಗಣಗಳು ಇರುವಂತೆ ಯೋಜಿಸಲಾಗಿತ್ತು. ಮಧ್ಯಭಾಗದಲ್ಲಿ ಶಯ್ಯಾ ಗೃಹಗಳನ್ನೊಳಗೊಂಡಿದ್ದ ಷಿನ್‍ಡೆನ್; ಅದರ ದಕ್ಷಿಣಕ್ಕೆ ಒಂದು ಕೊಳ; ಉತ್ತರ, ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ವಾಸಗೃಹದ ಇತರ ಭಾಗಗಳು ಇರುತ್ತಿದ್ದುವು. ಆ ಕಟ್ಟಡಗಳ ಪೂರ್ವ ಮತ್ತು ಪಶ್ಚಿಮದಿಕ್ಕುಗಳಲ್ಲೂ ಕೊಳದ ಹೊರಬದಿಯಲ್ಲೂ ಸಣ್ಣಕೋಣೆಗಳಿರುತ್ತಿದ್ದುವು. ಅವಲ್ಲದೆ ಅಡಿಗೆ ಮನೆ, ನೌಕರರ ವಸತಿಗಳು, ಕೊಟ್ಟಿಗೆ ಮುಂತಾದ ಕಟ್ಟಡಗಳೂ ಇರುತ್ತಿದ್ದುವು. ಇಂಥ ಕಟ್ಟಡಗಳನ್ನು ಷಿನ್‍ಡೆನ್‍ಜುಕುರಿ ಎಂದು ಕರೆಯಲಾಗುತ್ತಿತ್ತು. ಆ ರೀತಿಯ ವಸತಿಗಳು ಶ್ರೀಮಂತರಿಗೆ ಮಾತ್ರ ಮೀಸಲಾಗಿದ್ದುವು. ಚೀನೀ ಮೂಲದ ಸಮಪ್ರಮಾಣದ ನಿರ್ಮಾಣಗಳು ಕ್ರಮೇಣ ಕಣ್ಮರೆಯಾದುವು. ಷಿನ್‍ಡೆನ್‍ಜುಕುರಿ ಶೈಲಿಯ ವಸತಿಗಳು ದೇಶದ ಎಲ್ಲೆಡೆಗಳಲ್ಲೂ ಜನಪ್ರಿಯವಾಗಿದ್ದರೂ ಪ್ರತಿಯೊಂದು ಪ್ರದೇಶದಲ್ಲೂ ಅವು ತಮ್ಮ ವೈಶಾಲ್ಯ ಮತ್ತು ಶ್ರೀಮಂತಿಕೆಯನ್ನು ಉಳಿಸಿಕೊಂಡು ಬರಲಾಗಲಿಲ್ಲ.

ಷಿನ್‍ಡೆನ್ ಆಯಾಕಾರವಾಗಿತ್ತು. ಸುತ್ತಲೂ ವರಾಂಡ ಮತ್ತು ಸೂರುಗಳು ಇದ್ದುವು. ಅದರ ಒಂದು ಮೂಲೆಯಲ್ಲಿದ್ದ ಶಯ್ಯಾಗೃಹವನ್ನು ಬಿಟ್ಟರೆ ಉಳಿದ ಭಾಗವೆಲ್ಲ ತೆರೆದಿರುತ್ತಿತ್ತು. ರಂಧ್ರಗಳೂ ಕೀಲಿಗಳೂ ಇದ್ದ ಮೇಲ್ಭಾಗವನ್ನುಳ್ಳ, ಪೂರ್ಣವಾಗಿ ಹೊರತೆಗೆಯಬಹುದಾಗಿದ್ದ ಕೆಳಭಾಗವನ್ನುಳ್ಳ ಮರದ ತಡಿಕೆಗಳನ್ನು ಆ ಕಟ್ಟಡಗಳಲ್ಲಿ ಗೋಡೆಗಳ ಬದಲು ಉಪಯೋಗಿಸುತ್ತಿದ್ದರು. ರಾತ್ರಿಯ ಕಾಲವನ್ನು ಬಿಟ್ಟು ಉಳಿದೆಲ್ಲ ಸಮಯಗಳಲ್ಲೂ ಮೇಲ್ಭಾಗವನ್ನು ತೆರೆದಿಟ್ಟಿರಲಾಗಿರುತ್ತಿತ್ತು. ವಿಶೇಷ ಸಂದರ್ಭಗಳಲ್ಲಿ ಕೆಳಭಾಗವನ್ನೂ ತೆಗೆಯುತ್ತಿದ್ದರು; ಹಜಾರವನ್ನು ಸಂದರ್ಭಕ್ಕನುಸಾರವಾಗಿ ಪರದೆಗಳಿಂದ ವಿಭಜಿಸಿಕೊಳ್ಳಲಾಗುತ್ತಿತ್ತು. ನೆಲಗಟ್ಟನ್ನು ಮರದ ಸಾಮಗ್ರಿಗಳಿಂದ ಮಾಡಿರಲಾಗುತ್ತಿತ್ತು. ಜನರು ಕೂಡಲು ಹುಲ್ಲಿನ ಚಾಪೆಗಳನ್ನು ಉಪಯೋಗಿಸಲಾಗುತ್ತಿತ್ತು. ಇಂಥ ಷಿನ್‍ಡೆನ್‍ಜುಕುರಿ ಗೃಹಗಳನ್ನು ಶ್ರೀಮಂತ ಮನೆತನಗಳವರು ತಮ್ಮ ಅಮಿತವಾದ ಸೇವಕವರ್ಗದವರ ಸಹಾಯದಿಂದ ಮಾತ್ರ ಉಪಯೋಗಿಸಲು ಸಾಧ್ಯವಿತ್ತು. ವಿಲಾಸೀ ಜೀವನ ನಡೆಸುತ್ತಿದ್ದ ಕೀಯೋಟೋ ನಗರದ ಶ್ರೀಮಂತರು ತಮ್ಮ ಕೊನೆಮೊದಲಿಲ್ಲದ ಭೋಜನಕೂಟ-ಆಮೋದಜೀವನ ನಡೆಸಲು ಅವು ಅನುಕೂಲಕರವಾಗಿದ್ದುವೆಂಬುದು ನಿಜ. ಷಿನ್‍ಡೆನ್ ಹೆಚ್ಚು ತೆರವಾಗಿದ್ದುದರಿಂದ ಸುತ್ತಣ ಉದ್ಯಾನದೊಂದಿಗೆ ಹೊಂದಿಕೊಂಡಿರುತ್ತಿತ್ತು. ಬೇಸಗೆಯಲ್ಲಿ ಕೀಯೋಟೋ ನಗರದ ಬಿಸಿಲಿನ ಬೇಗೆಯನ್ನು ಉಪಶಮನಗೊಳಿಸಲು ಧಾರಾಳವಾಗಿ ಗಾಳಿ ಬರುವಂತೆ ಹೆಚ್ಚಿನ ಸೌಲಭ್ಯವಿರುತ್ತಿತ್ತು. 19ನೆಯ ಶತಮಾನದಲ್ಲಿ ನಿರ್ಮಿಸಲಾದ ಕೀಯೋಟೋ ಅರಮನೆ ಮೊದಲ ಕಾಲದ ಷಿನ್‍ಡೆನ್ ಜುಕುರಿ ಗೃಹಗಳ ವಾಸ್ತುಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆಂದು ನಂಬಲಾಗಿದೆ.
10-11ನೆಯ ಶತಮಾನಗಳಲ್ಲಿ ಜಪಾನಿನಲ್ಲಿ ಬುದ್ಧ ಅಮಿದನನ್ನು (ಅಮಿತಾಭ ಬುದ್ಧ) ಪೂಜಿಸುತ್ತಿದ್ದ ಹೊಸ ಪಂಥ ಅಸ್ತಿತ್ವಕ್ಕೆ ಬಂದದ್ದರ ಫಲವಾಗಿ ಟೆಂಡೈ ಮತ್ತು ಷಿಂಗೊನ್ ಪಂಥಗಳ ಮಾಂತ್ರಿಕ ಮತ್ತು ತಾತ್ತ್ವಿಕ ನಂಬಿಕೆಗಳು ಮೂಲೆಗುಂಪಾದುವು. ಬುದ್ಧ ಅಮಿದನ ನಾಮದ ಧ್ಯಾನಪ್ರಧಾನವಾಗಿದ್ದ ಈ ಹೊಸ ಪಂಥ ಶ್ರೀಮಂತರಿಗೂ ಸಾಮಾನ್ಯಜನರಿಗೂ ಸಮಾನವಾಗಿ ಆಕರ್ಷಕವಾಯಿತು. ಕ್ರಮೇಣ ಈ ಹೊಸ ಪಂಥ ಬಹಳ ಜನಪ್ರಿಯತೆ ಗಳಿಸಿತಲ್ಲದೆ ಇತರ ಬೌದ್ಧ ಪಂಥಗಳನ್ನು ಸಹ ಮೂಲೆಗುಂಪಾಗಿಸಿತು. ಶ್ರೀಮಂತವರ್ಗದವರು ಮರಣೋತ್ತರ ಸ್ವರ್ಗಸುಖಕ್ಕಾಗಿ ಕಾಯಲಾರದೆ ಈ ಹೊಸ ಪಂಥದ ಪವಿತ್ರ ಗ್ರಂಥಗಳಲ್ಲಿ ವರ್ಣಿಸಲಾದ ಬುದ್ಧ ಅಮಿದನ ಪಶ್ಚಿಮದಿಕ್ಕಿನ ಸ್ವರ್ಗವನ್ನು ಹೋಲುವ ಮಂದಿರಗಳನ್ನು ನಿರ್ಮಿಸಲು ಪ್ರಾರಂಭಿಸಿದರು. ಅಂಥ ಮಂದಿರಗಳ ಮಧ್ಯ ಭಾಗದಲ್ಲಿ ಒಂದಂಕಣ ಚೌಕದ ಗರ್ಭಗುಡಿಯಲ್ಲಿ ಅಮಿದ ವಿಗ್ರಹವನ್ನು ಪ್ರತಿಷ್ಠಿಸಲಾಗುತ್ತಿತ್ತು. ಅದಕ್ಕೆ ಕೂಡಿದಂತೆ ವಿಶಾಲವಾದ ಬುದ್ಧ ಅಮಿದನ ಹಜಾರವಿರುತ್ತಿತ್ತು. ಅವುಗಳ ಸುತ್ತ ಭಕ್ತಜನರ ಉಪಯೋಗಕ್ಕಾಗಿ ಪ್ರದಕ್ಷಿಣ ಮಾರ್ಗವಿರುತ್ತಿತ್ತು. ಹಜಾರಗಳಲ್ಲಿ ಸರಳವಾದ್ದು ಕೇವಲ ಮೂರಂಕಣಗಳ ಚೌಕವಾಗಿದ್ದರೆ ಮತ್ತೆ ಕೆಲವು ಬಹಳ ವಿಶಾಲವಾಗಿದ್ದುವು. ಅವುಗಳ ಒಳಭಾಗವನ್ನು ವಿಶೇಷವಾಗಿ ಅಲಂಕರಿಸಲಾಗುತ್ತಿತ್ತು. ಈ ಹಜಾರಗಳಲ್ಲಿ ಗಮನಾರ್ಹವಾದ್ದು ಉಜಿಯ ಬ್ಯೋಡೋಇನ್‍ಗೆ ಸೇರಿದ ಫೀನಿಕ್ಸ್ ಹಜಾರ. ಅದು ಸಣ್ಣದಾದರು ಆಕರ್ಷಕವಾಗಿಯೂ ಸೌಂದರ್ಯಪೂರ್ಣವಾಗಿಯೂ ಇದೆ. ಷಿನ್‍ಡೆನ್‍ಜುಕುರಿ ಶೈಲಿಯ ಕೆಲವು ಲಕ್ಷಣಗಳನ್ನು ಸಹ ಅದರಲ್ಲಿ ಕಾಣಬಹುದು.

12ನೆಯ ಶತಮಾನದಲ್ಲಿ ಕೀಯೋಟೋ ಆಡಳಿತ ಕ್ಷೀಣಿಸಿ ಕಾಮಾಕುರಾದಲ್ಲಿ ಕೇಂದ್ರೀಯ ಸೈನಿಕ ಪ್ರಭುತ್ವ ಅಧಿಕಾರಕ್ಕೆ ಬಂತು. ಆ ಕಾಲದಲ್ಲಿ ಚೀನದೊಂದಿಗೆ ಪುನಃ ಸಂಪರ್ಕ ಬೆಳೆಯಿತು. ಜೆನ್ ಬೌದ್ಧ ಪಂಥದ ಪ್ರವೇಶವಾಯಿತು. ಅದರ ಪ್ರಭಾವದಿಂದ ವಾಸ್ತುಕಲೆಯಲ್ಲಿ ಹೆಚ್ಚಿನ ಮಾರ್ಪಾಟುಗಳಾದುವು. ಎರಡು ಹೊಸ ಬೌದ್ಧ ವಾಸ್ತುಶೈಲಿಗಳು ಹುಟ್ಟಿಕೊಂಡುವು. ದಕ್ಷಿಣ ಚೀನದಲ್ಲಿ ಮೊದಲಿಗೆ ಆವಿರ್ಭವಿಸಿದ ಭಾರತೀಯ ಶೈಲಿ (ಟೆಂಜಿಕುಯೊ) ಸತ್ತ್ವಪೂರ್ಣವಾಗಿತ್ತು. ಬೃಹತ್ ಪ್ರಮಾಣದ ಚಾವಣಿಗಳು ಮತ್ತು ನೇರವಾದ ಕಟ್ಟಡಗಳ ಅಂಶಗಳು ಆ ಶೈಲಿಯ ಪ್ರಮುಖಲಕ್ಷಣಗಳು. ಜಪಾನಿನಲ್ಲಿ ಆ ಶೈಲಿಯನ್ನು ಸೀಮಿತವಾಗಿ ಬಳಸಲಾಗಿದ್ದರೂ ಅನಂತರ ಕಾಲದ ವಾಸ್ತುನಿರ್ಮಾಣಗಳ ಮೇಲೆ ಅದರ ಪ್ರಭಾವ ವಿಶೇಷವಾಗಿದೆ. ಎರಡನೆಯದಾದ ಚೀನೀ ಶೈಲಿ (ಕರಯೋ) ಆಹ್ಲಾದಕರವೂ ಅಲಂಕಾರಪೂರ್ಣವೂ ಆಗಿತ್ತು. ವಿಶೇಷವಾದ ಚಾವಣಿಗಳಿಗೆ ಆಧಾರವಾದ ವಿಶಾಲ ಕಂಸಗಳು, ಬೀಸಣಿಗೆ ಯಾಕಾರದ ಅಡ್ಡತೊಲೆಗಳು, ಬಹಳ ಡೊಂಕಾದ ಮತ್ತು ಇಳಿಜಾರಾದ ಚಾವಣಿಗಳು ಮತ್ತು ಮೊನಚಾದ, ಕಮಾನಿನ ಆಕಾರದ ಕಿಟಕಿಗಳು ಆ ಶೈಲಿಯ ಮುಖ್ಯ ಲಕ್ಷಣಗಳು. ಜೆನ್ ಪಂಥದ ಪೂಜಾಹಜಾರಗಳನ್ನು ಈ ಶೈಲಿಯಲ್ಲಿ ನಿರ್ಮಿಸಲಾಗುತ್ತಿತ್ತು. ಕಾಮಾಕುರಾದಲ್ಲಿರುವ ಎಂಗಕುಜಿಯ ಅವಶೇಷಗಳ ಹಜಾರ ಈ ಶೈಲಿಗೆ ಉತ್ತಮ ನಿದರ್ಶನ.
ಈ ಹೊಸ ಶೈಲಿಗಳ ವಿರುದ್ಧವಾಗಿ, ಮೊದಲಿನಿಂದ ಜಪಾನಿನಲ್ಲಿ ಬಳಕೆಯಲ್ಲಿದ್ದ ವಾಸ್ತುಶೈಲಿಯನ್ನು ಜಪಾನೀ ಶೈಲಿ (ವಯೊ) ಎಂದು ಕರೆಯಲಾಗಿತ್ತು. ಆ ಕಾಲದ ಬೌದ್ಧ ವಾಸ್ತುನಿರ್ಮಾಣಗಳಲ್ಲಿ ಸಾಮಾನ್ಯವಾಗಿ ಈ ಮೂರೂ ಶೈಲಿಗಳ ಸಮ್ಮಿಲನ ಕಂಡುಬರುತ್ತದೆ. ಮೊದಲು ಜಪಾನೀ ಮತ್ತು ಭಾರತೀಯ ಶೈಲಿಗಳ ಸಂಗಮವಾಯಿತು. ಅನಂತರ ಜಪಾನೀ ಮತ್ತು ಚೀನೀ ಶೈಲಿಗಳು ಸೇರಿದ ಕಟ್ಟಡಗಳು ನಿರ್ಮಾಣವಾದುವು. ತರುವಾಯ ಜಪಾನೀ, ಭಾರತೀಯ ಮತ್ತು ಚೀನೀ ಶೈಲಿಗಳು ಬೆರೆತವು. ಓಸಾಕದಲ್ಲಿರುವ ಕನ್‍ಷಿನ್‍ಜಿ ಮಂದಿರದ ಪ್ರಧಾನ ಹಜಾರದಲ್ಲಿ ಈ ಮೂರೂ ಶೈಲಿಗಳ ಲಕ್ಷಣಗಳು ಕೂಡಿರುವುದನ್ನು ಕಾಣಬಹುದು.

ಕಾಮಕೂರ ಕಾಲದಲ್ಲಿ ಯೋಧವರ್ಗ ಪ್ರಧಾನವಾಗಿತ್ತು. ಬುಕೆಜûುಕುರಿ ಎಂಬ ವಾಸಗೃಹಗಳ ಹೊಸ ಶೈಲಿ ಹುಟ್ಟಿಕೊಂಡಿದ್ದು ಆ ಕಾಲದಲ್ಲಿ. ಷಿನ್‍ಡೆನ್ ಜûುಕುರಿಯ ಕೆಲವು ಅಂಶಗಳೂ ಹೊಲಮನೆಗಳ ಕೆಲವಂಶಗಳೂ ಈ ಕಟ್ಟಡಗಳಲ್ಲಿ ಸೇರಿದ್ದುವು. ಷಿನ್‍ಡೆನ್‍ಜûುಕುರಿಯಂತೆ ವಿಶಾಲವಾದ ಹಜಾರ ಪ್ರಧಾನವಾಗಿದ್ದರೂ ಬುಕೆಜûುಕುರಿಯಲ್ಲಿ, ಹಜಾರದ ಸುತ್ತ ಅಥವಾ ಒಂದು ಪಾಶ್ರ್ವದಲ್ಲಿ, ಸರಿಸಬಹುದಾಗಿದ್ದ ರಟ್ಟಿನ ಹಲಗೆಗಳಿಂದ ಬೇರ್ಪಡಿಸಿದ ಕೆಲವು ಕೋಣೆಗಳಿದ್ದುವು. ಈ ಕಟ್ಟಡಗಳಲ್ಲಿ ಜಾಲಂಧ್ರಗಳಿದ್ದ ಬಾಗಿಲುಗಳ ಬದಲು ಅಂಥ ಜಾಲಂಧ್ರಗಳಿಗೆ ಕಾಗದವನ್ನು ಅಂಟಿಸಿದ ಬಾಗಿಲುಗಳನ್ನು ಬಳಸಲಾಗುತ್ತಿತ್ತು. ಕೋಣೆಗಳ ನೆಲಗಟ್ಟಿನ ಮೇಲೆ 6ಘಿ3 ವಿಸ್ಥಾರದ ಹುಲ್ಲಿನ ಚಾಪೆಗಳನ್ನು ಹಾಸುತ್ತಿದ್ದರು. ಅನಂತರಕಾಲದ ಜಪಾನೀ ಗೃಹಗಳಲ್ಲಿ ಅಂಥ ಚಾಪೆಗಳನ್ನು ಸದಾ ಉಪಯೋಗಿಸಲಾಗುತ್ತಿತ್ತು. ಶ್ರೀಮಂತ ಯೋಧರ ಮನೆಗಳ ಸುತ್ತ ಕೋಟೆ ಕಂದಕಗಳನ್ನು ನಿರ್ಮಿಸಲಾಗುತ್ತಿತ್ತು. ಕೋಟೆ ಗೋಡೆಗಳಲ್ಲಿ ಹೆಬ್ಬಾಗಿಲುಗಳೂ ಕಾವಲುಗಾರರ ಬುರುಜುಗಳೂ ಇದ್ದುವು.

ಹೆಚ್ಚು ಶ್ರೀಮಂತಿಕೆಯುಳ್ಳ ಎಲ್ಲ ವರ್ಗದವರೂ ಷಿನ್‍ಡೆನ್‍ಜûುಕುರಿ ಮಾದರಿಯ ಮನೆಗಳನ್ನು ಕಟ್ಟಿಸುತ್ತಿದ್ದರೂ ಶ್ರೀಮಂತ ಯೋಧರು ತಮ್ಮ ವಾಸಗೃಹಗಳಲ್ಲಿ ಜುಕೆಜûುಕುರಿ ಗೃಹಗಳು ಲಕ್ಷಣಗಳನ್ನೂ ಅಳವಡಿಸಿಕೊಳ್ಳುತ್ತಿದ್ದರು. ಶ್ರೀಮಂತ ಧಾರ್ಮಿಕವರ್ಗದವರ ಮನೆಗಳಲ್ಲಿ ಅಧ್ಯಯನ ಕೋಣೆ (ಷಾಯಿನ್) ಎಂಬ ನೂತನ ಅಂಗವೊಂದು ಸೇರಿತು. ಇದರಲ್ಲಿ ಪ್ರಮುಖವಾಗಿ ಒಂದು ಕಿಟಕಿ, ಅದಕ್ಕೆ ಹೊಂದಿದಂತೆ ಮೇಜಿನಂತೆ ಉಪಯೋಗಿಸಬಹುದಾಗಿದ್ದ, ಆವಶ್ಯಕವಿಲ್ಲದಾಗ ಮಡಿಸಬಹುದಾಗಿದ್ದ ಅಗಲವಾದ ಹಲಗೆ ಇದ್ದುವು. ಕಿಟಕಿಯ ಪಕ್ಕದಲ್ಲಿ ಪ್ರಸ್ತಕಗಳನ್ನು ಇಡಲು ಒಂದು ಕಪಾಟನ್ನೂ ಚಿತ್ರಪಟಗಳನ್ನು ನೇತುಹಾಕಲು ನಿರ್ದಿಷ್ಟಸ್ಥಳಗಳನ್ನೂ ಒದಗಿಸಲಾಗಿತ್ತು.

ಚೆóನ್ ಬೌದ್ಧಪಂಥದ ಪ್ರಭಾವಕ್ಕೊಳಗಾದ ಶ್ರೀಮಂತ ಯೋಧರು ಅಧ್ಯಯನ ಕೋಣೆಯನ್ನುಳ್ಳ ಕಟ್ಟಡಗಳನ್ನು ಹೆಚ್ಚುಹೆಚ್ಚಾಗಿ ಕಟ್ಟಿಸಲಾರಂಭಿಸಿದರು. ಆದರೆ ಅವರಲ್ಲಿ ವಿದ್ಯೆಗೆ ಹೆಚ್ಚು ಪ್ರಾಧಾನ್ಯವಿಲ್ಲದ್ದರಿಂದ ಅವರು ಅಧ್ಯಯನಕೋಣೆಗಳನ್ನು ಆಮೋದ-ಪ್ರಮೋದಗಳಿಗೆ ಉಪಯೋಗಿಸುತ್ತಿದ್ದರು. ಆದ್ದರಿಂದ ಅವು ವಿಸ್ತಾರವಾಗಿಯೂ ಅಲಂಕಾರಪೂರ್ಣವಾಗಿಯೂ ಇದ್ದುವು. 14-15ನೆಯ ಶತಮಾನಗಳಲ್ಲಿ ಇಡೀ ಕಟ್ಟಡಕ್ಕೆ ಷಾಯಿನ್ ಎಂಬ ಹೆಸರು ಬಂತು.

ಆ ಕಾಲದ ವಾಸಗೃಹಗಳಲ್ಲಿ ಪ್ರಸಿದ್ಧವೆಂದರೆ ಕಿಂಕುಕುಜಿ ಅಥವಾ ಚಿನ್ನದ ಪ್ರಾಂಗಣಗಳು ಮತ್ತು ಗಿಂಕಕುಚಿ ಅಥವಾ ಬೆಳ್ಳಿಯ ಪ್ರಾಂಗಣಗಳು. ಕಿಂಕುಕುಜಿಗಳಲ್ಲಿ ಮುಖ್ಯವಾದ್ದು 14ನೆಯ ಶತಮಾನದಲ್ಲಿ ಆಷಿಕಾಗಾ ಯೊಷಿಮಿಟ್ಸು ಎಂಬ ಶೋಗನ್ ಕಟ್ಟಿಸಿದ ಅರಮನೆಯ ಭಾಗ. ಅದನ್ನು 1950ರಲ್ಲಿ ಒಬ್ಬ ದಂಗೆಕೋರ ನಾಶಗೊಳಿಸಿದರೂ ಬಹು ಮಟ್ಟಿಗೆ ಮೊದಲಿನ ರೂಪದಲ್ಲಿ ಅದನ್ನು ಪುನರ್ನಿರ್ಮಿಸಲಾಗಿದೆ. ಸಣ್ಣದಾದ, ಮೂರು ಅಂತಸ್ತುಗಳ ಈ ಕಟ್ಟಡದಲ್ಲಿ ಕೆಳಗಿನ ಎರಡು ಅಂತಸ್ತುಗಳದು ಷಿನ್‍ಡೆನ್‍ಜುಕುರಿ ಮಾದರಿ. ಮೂರನೆಯ ಅಂತಸ್ತು ಚೀನೀ ಜೆóನ್ ಪಂಥದ ವಿಹಾರಗಳನ್ನು ಹೋಲುತ್ತದೆ. ಈ ಎರಡು ವಿಭಿನ್ನಶೈಲಿಗಳನ್ನು ಬಹಳ ಪ್ರಯತ್ನಪೂರ್ವಕವಾಗಿ ಒಂದುಗೂಡಿಸಿ ಸುಂದರ ಸಮನ್ವಯತೆಯನ್ನು ಸಾಧಿಸಲಾಗಿದೆ. ಯೊಷಿಮಿಟ್ಸುವಿನ ವಂಶದವನಾದ ಆಷಿಕಾಗ ಯೊಷಿಮಾಸಾ 1480ರಲ್ಲಿ ಕಟ್ಟಿಸಿದ, ಅರಮನೆಗೆ ಸೇರಿದ, ಗಿಂಕಕುಜಿ ಕಟ್ಟಡ ಕಿಂಕುಕುಜಿಗಿಂತ ಸಣ್ಣದೂ ಕಡಿಮೆ ವೈಭವವುಳ್ಳದ್ದೂ ಆಗಿದ್ದರೂ ಷಿನ್‍ಡೆನ್‍ಜûುಕುರಿ ಶೈಲಿಯಿಂದ ಷಾಯಿನ್ ಜûುಕುರಿ ಶೈಲಿಯತ್ತ ಆದ ಮಾರ್ಪಾಟುಗಳನ್ನು ನಿರೂಪಿಸುವ ಉತ್ತಮ ನಿದರ್ಶನವೆನಿಸಿದೆ.

ಮುರೋಮಚಿ ಕಾಲದಲ್ಲಿ (1335-1573) ಚೀನದಿಂದ ಪ್ರವೇಶಿಸಿದ ಚಹ ಕುಡಿಯುವ ಪದ್ಧತಿ ಬಹಳ ಜನಪ್ರಿಯವಾಯಿತು. ಕ್ರಮೇಣ ಚಹ ಕುಡಿಯುವ ವೈಶಿಷ್ಟ್ಯಪೂರ್ಣವಾದ ವಿಧ್ಯುಕ್ತ ಪದ್ಧತಿಗಳು ಬೆಳೆದುವು. ಇವುಗಳಲ್ಲಿ ವಬಿ ಪದ್ಧತಿ ಒಂದು. ಇದು ಶ್ರೀಮಂತವರ್ಗಗಳಲ್ಲಿ ಜನಪ್ರಿಯತೆ ಗಳಿಸಿತು. ಅದಕ್ಕಾಗಿಯೇ ಚಷಿಟ್ಸು (ಚಹಾಗೃಹ) ಎಂಬ ವಿಶಿಷ್ಟಮಾದರಿಯ ಕಟ್ಟಡಗಳು ನಿರ್ಮಾಣವಾದುವು. ಚಷಿಟ್ಸು ಮೊದಲು ಜಪಾನಿ ಹೊಲಮನೆಯ ಅನುಕರಣೆ. ಅದು ಬಹಳ ಸಣ್ಣದು. ನೋಡಲು ಬಲು ಸರಳ. ಅದರ ಚಾವಣಿ ಹುಲ್ಲಿನದು. ಅದರ ಮರದ ಕಂಬಗಳೂ ಅಡ್ಡತೊಲೆಗಳೂ ಬಹಳ ನವಿರು. ಗೋಡೆಗಳು ಮಣ್ಣಿನವು. ಗೋಡೆಗಳಲ್ಲಿದ್ದ ರಂಧ್ರಗಳೇ ಕಿಟಕಿಗಳು, ಒಂದು ವರ್ಣಚಿತ್ರ, ಒಂದು ಹೂವಿನ ಗುಚ್ಛ, ಒಂದು ಕಲಾವಸ್ತು ಇವಿಷ್ಟೇ ಈ ಗೃಹಗಳ ಅಲಂಕಾರ ವಸ್ತುಗಳು.

ಕೀಯೋಟೋದ ಸೈನಿಕ ಆಡಳಿತ ಮುರೋಮಚಿ ಕಾಲದ ಕೊನೆಯ ವರೆಗೂ ದೇಶದ ಏಕತೆಯನ್ನು ಹೆಸರಿಗೆ ಮಾತ್ರ ಉಳಿಸಿಕೊಂಡು ಬರುತ್ತಿದ್ದರೂ, ಪ್ರಾಂತೀಯ ಶ್ರೀಮಂತರು ಸ್ವತಂತ್ರ ಮನೋವೃತ್ತಿ ಬೆಳೆಸಿಕೊಂಡು, ತಮ್ಮತಮ್ಮಲ್ಲೇ ಕಚ್ಚಾಡುತ್ತಿದ್ದರು. ಇವರು ಅನೇಕ ಕೋಟೆಗಳನ್ನು ಕಟ್ಟಿಸಿದರು. ಇವುಗಳಲ್ಲಿ ಬೇರೆ ಬಗೆಯ ವಾಸ್ತುವಿಧಾನಗಳು ಬೆಳೆದುವು. 16ನೆಯ ಶತಮಾನದ ಕೊನೆಯಲ್ಲಿ ಟೊಯೊಟೊಮಿ ಹಿಡೆಯೊಷಿ ದೇಶದ ಐಕ್ಯವನ್ನು ಮತ್ತೆ ಸಾಧಿಸಿದಾಗ ಅವನು ಅನೇಕ ಅಂತಸ್ತುಗಳ ಕೋಟೆಗಳ ದೊಡ್ಡ ಸರಣಿಯನ್ನೇ ನಿರ್ಮಿಸಿದ. ಅವುಗಳ ರಕ್ಷಣೆಗಾಗಿ ಕಾವಲುಗಾರರ ಗೋಪುರಗಳನ್ನು ಕೋಟೆಗಳ ಗೋಡೆ ಮತ್ತು ಅವುಗಳ ಸುತ್ತ ಕಂದಕಗಳನ್ನು ನಿರ್ಮಿಸಲಾಯಿತು. ದೇಶಾದ್ಯಂತ ಅಂಥ ಅನೇಕ ಕೋಟೆಗಳು ಶ್ರೀಮಂತವರ್ಗದವರಿಂದ ನಿರ್ಮಿತವಾದುವು. 17ನೆಯ ಶತಮಾನದ ಅನಂತರ ಅಂಥ ಕೋಟೆಗಳಿಗೆ ಯಾವುದೇ ರಕ್ಷಣೆಯ ಆವಶ್ಯಕತೆಯಿಲ್ಲದಿದ್ದರೂ ಅವು ಪ್ರತಿದಾಯಕವಾದ ವ್ಯಾಪಾರಕೇಂದ್ರಗಳಾಗಿ ಜಪಾನೀ ಸಾಮಾಜಿಕ ಜೀವನದಲ್ಲಿ ಮತ್ತು ವೈಶಿಷ್ಟ್ಯವನ್ನುಳಿಸಿಕೊಂಡುವು. ಅಂಥ ಕೋಟೆಗಳ ಉತ್ತಮ ನಿದರ್ಶನವೆಂದರೆ ಹಿಮೆಜಿ ಕೋಟೆ. ಅದರ ಬಿಳಿಯ ಗೋಡೆಗಳು ಮತ್ತು ಎತ್ತರದ ಚಾವಣಿಗಳು ಸೌಂದರ್ಯಪೂರ್ಣವಾಗಿವೆ.

ಅಂಥ ಕೋಟೆಗಳ ಒಳಭಾಗದಲ್ಲಿ ಷಾಯಿನ್‍ಜûುಕುರಿ ಶೈಲಿಯ ಔನ್ನತ್ಯವನ್ನು ಪ್ರತಿನಿಧಿಸುವ ಭವ್ಯ ಅರಮನೆಗಳು ಸಂಪದ್ಭರಿತವಾದ ಮೊಮೊಯಮ ಕಾಲದಲ್ಲಿ (1574-1603) ನಿರ್ಮಿತವಾಗಿರುವುದರಿಂದ ಅವು ವಿಸ್ತಾರವಾಗಿವೆ. ಒಳಭಾಗದ ಅಲಂಕರಣ ಪ್ರಧಾನವಾಗಿದೆ. ಒಳಗೋಡೆಗಳಲ್ಲಿ ಮತ್ತು ಬಾಗಿಲು ಚೌಕಟ್ಟುಗಳಲ್ಲಿ ಉಪಯೋಗಿಸಿರುವ ಮರದ ಕಂಬ ಮತ್ತು ತೊಲೆಗಳಿಗೆ ವಿಶಿಷ್ಟವಾದ ಗಾಂಭೀರ್ಯಗಳನ್ನು ಪುಷ್ಟಿಗೊಳಿಸುವ ಸಲುವಾಗಿ ಕಟ್ಟಡಗಳ ಮಹತ್ತ್ವವನ್ನು ಹೆಚ್ಚಿಸಲಾಗಿತ್ತು.
ಸುಮಾರು ಅದೇ ಕಾಲದಲ್ಲಿ ಸುಕಿಯಜûುಕುರಿ ಎಂಬ, ಹೊಸ ಶೈಲಿಯ, ಷಾಯಿನ್ ಮತ್ತು ಚಹಗೃಹಗಳೆರಡರ ಸಮ್ಮಿಲನದ, ಕಟ್ಟಡಗಳು ನಿರ್ಮಾಣವಾಗಲಾರಂಭಿಸಿದುವು. ಅವು ಸರಳವೂ ವರ್ಗಪ್ರಧಾನವಾಗಿಲ್ಲದೆಯೂ ಇದ್ದುವು. ಕಂಬಗಳು, ಅಡ್ಡತೊಲೆಗಳು ತೆಳುವಾಗಿಯೂ ಚಾವಣಿ ಹಗುರವಾಗಿಯೂ ಅಲಂಕರಣ ಕಡಿಮೆಯಾಗಿಯೂ ಇದ್ದುವು. 17ನೆಯ ಶತಮಾನದ ಪೂರ್ವಾರ್ಧದಲ್ಲಿ ಕೀಯೋಟೋ ನಗರದಲ್ಲಿ ಕಟ್ಟಿಸಲಾದ ಅರಮನೆ ಈ ಶೈಲಿಯ ಉತ್ತಮ ನಿದರ್ಶನ. ಅದರ ಮುಖ್ಯಕಟ್ಟಡ ಹಗುರವೂ ಸರಳವೂ ಆಗಿರುವುದಲ್ಲದೆ ನೆರೆಹೊರೆಯ ಸಣ್ಣ ನಿರ್ಮಾಣಗಳೂ ಗಮನಾರ್ಹ.

ಮಧ್ಯದಲ್ಲಿರುವ ಅರಮನೆಯ ಭಾಗದಲ್ಲಿ ಡೊಂಕುಡೊಂಕಾಗಿ ವ್ಯವಸ್ಥೆಗೊಳಿಸಿದ ಮೂರು ಷಾಯಿನ್ ಕೊಠಡಿಗಳುಂಟು. ಅವುಗಳ ಪೂರ್ವದಿಕ್ಕಿನಲ್ಲಿ ಅವೆಲ್ಲದರ ಮುಂಭಾಗದಲ್ಲಿ ಕಾಣುವಂತೆ ಅಲ್ಲಿಯ ಸುಂದರ ಉದ್ಯಾನದ ಮಧ್ಯದಲ್ಲಿ ಒಂದು ಕೊಳವನ್ನು ನಿರ್ಮಿಸಲಾಗಿದೆ. ಕೊಳದ ಆಚೆ ಇರುವ ಚಹಗೃಹದ ಹೆಸರು ಷೋಕಿಂಟಿಯಿ. ಗ್ರಾಮೀಣ ನಿರ್ಮಾಣದಂತಿರುವ ಆ ಚಹಗೃಹ ಅರಮನೆಯ ಶ್ರೀಮದ್ಗಾಂಭೀರ್ಯವನ್ನು ಅಣಕಿಸುವಂತಿದೆ. ಉತ್ತರದಂಚಿನಿಂದ ಬಳಸಾದ ಕಾಲುಹಾದಿಯೊಂದು ಕೊಳವನ್ನು ಸುತ್ತಿಕೊಂಡು ಕಲ್ಲುಚಪ್ಪಡಿಗಳ ಸೇತುವೆಯನ್ನು ಹಾಯ್ದು ಅರಮನೆಯನ್ನು ತಲಪುತ್ತದೆ. ಅಲ್ಲಿಂದ ಮುಂದೆ ಹೋದರೆ ಮತ್ತೆರಡು ಚಹಗೃಹಗಳು ಮತ್ತು ಪ್ರಾಚೀನವಾದ ಒಂದು ಪುರಾತನ ಮಂದಿರವನ್ನು ಹಾಯ್ದು ವನಪ್ರದೇಶದ ಮೂಲಕ ಉದ್ಯಾನವನದ ದಕ್ಷಿಣದಂಚಿಗೆ ಆ ಕಾಲುಹಾದಿ ಕೊಂಡೊಯ್ಯುತ್ತದೆ.

ಕಟ್ಸುರ ಅರಮನೆ ಜಪಾನೀ ವಾಸ್ತುನಿರ್ಮಾಣಗಳಲ್ಲಿ ಉತ್ತಮವಾದ್ದೆಂದು ಹೇಳಲಾಗಿದ್ದರೂ ಅದರಲ್ಲಿ ಬಳಸಿರುವ ಕಂಬಗಳು ತೆಳುವಾದವು. ಅವನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿದೆ. ಸರಿಯಾದ ನಿರ್ಮಾಣತಂತ್ರಗಳನ್ನು ಬಳಸಿಲ್ಲ. ಇಂಥ ಕೊರತೆಗಳಿಂದಾಗಿ ಷಾಯಿನ್ ಶೈಲಿಯ ಶ್ರೀಮಂತಿಕೆ ಕಣ್ಮರೆಯಾಗಿದೆಯೆಂದು ಆರೋಪಿಸಲಾಗಿದೆ. ಆದರೆ ಅದರ ಸರಳಸೌಂದರ್ಯ ಆಧುನಿಕ ಪಾಶ್ಚಾತ್ಯ ವಾಸ್ತುಶಿಲ್ಪಗಳ ಮೆಚ್ಚುಗೆ ಗಳಿಸಿದೆ.

ಜಪಾನಿನ ಜನಜೀವನದ ಮೇಲೆ ಉಂಟಾಗಿದ್ದ ವಿದೇಶೀ ಪ್ರಭಾವಗಳನ್ನು 17ನೆಯ ಶತಮಾನದ ಮೊದಲ ಭಾಗದಲ್ಲಿ ಅಧಿಕಾರಕ್ಕೆ ಬಂದ ಟೋಕುಗಾವಾ ಮನೆತನ ಕಾನೂನುಗಳ ಮೂಲಕ ನಿಷೇಧಿಸಿತಲ್ಲದೆ, ಯಾವುದೇ ಹೊಸ ರಾಜಕೀಯ ಸಾಮಾಜಿಕ ಸುಧಾರಣೆಗಳಿಗೂ ಅವಕಾಶ ನೀಡಲಿಲ್ಲ. ಪ್ರತಿಯೊಂದು ವರ್ಗದವರೂ ನಿರ್ದಿಷ್ಟಶೈಲಿಯಲ್ಲಿ ನಿರ್ಮಿಸಿದ, ತಮ್ಮ ಅಂತಸ್ತಿಗೆ ಉಚಿತವಾದ, ಮನೆಗಳಲ್ಲೇ ವಾಸಿಸಬೇಕೆಂದು ವಿಧಿಸಿದ್ದರಿಂದ ಆ ಕಾಲದಲ್ಲಿ ವಿವಿಧ ಶೈಲಿಗಳ ವಾಸಗೃಹಗಳು ಪ್ರಚಲಿತವಾಗಿದ್ದುವು.

ಸುದೀರ್ಘವಾದ ಶಾಂತಿಯುತ ಆಡಳಿತವಿದ್ದುದರಿಂದ ಜನರ ಸಂಪತ್ತು ವೃದ್ಧಿಗೊಂಡಿತು. ಆಡಳಿತದ ವಿಧಿನಿಯಮಗಳಿಗನುಸಾರವಾಗಿ ವಿವಿಧ ವರ್ಗಗಳವರ ವಾಸಗೃಹಗಳ ಹೊರಭಾಗದ ನೋಟದಲ್ಲಿ ಹೆಚ್ಚಿನ ಬದಲಾವಣೆಗಳಾಗದಿದ್ದರೂ ಒಳಭಾಗದ ಅಲಂಕರಣದ ಕೆಲಸ ವೈಭವಪೂರ್ಣವಾಗುತ್ತ ನಡೆದಿತ್ತು. ಅವು ಹೆಚ್ಚು ವಿಶಾಲವೂ ಉಪಯುಕ್ತ ಅಂಶಗಳನ್ನೊಳಗೊಂಡವು ಆದುವು.
ಟೋಕುಗಾವಾ ಆಡಳಿತ ಅನೇಕ ಸಾರ್ವಜನಿಕ ಕಟ್ಟಡಗಳ ನಿರ್ಮಾಣಕಾರ್ಯ ಕೈಗೊಂಡಿತಲ್ಲದೆ ಬೌದ್ಧದೇವಾಲಯಗಳ ಮತ್ತು ಮೃತ ಶ್ರೀಮಂತ ಅಧಿಕಾರಿಗಳ ಸ್ಮಾರಕಮಂದಿರಗಳ ಪುನರ್ನಿರ್ಮಾಣ ಕಾರ್ಯವನ್ನೂ ಪ್ರಾರಂಭಿಸಿತು. ಆದರೆ ವಾಸ್ತುನಿರ್ಮಾಣಪದ್ಧತಿಯಲ್ಲಿ ಯಾವ ಮಹತ್ತ್ವಪೂರ್ಣ ಬದಲಾವಣೆಯೂ ಆಗಲಿಲ್ಲ. ಮರಗೆಲಸದಲ್ಲಿ ಬಹಳ ಸುಧಾರಣೆಗಳಾದುವು. ಸಾರ್ವಜನಿಕ ಕಟ್ಟಡಗಳಲ್ಲೂ ಶ್ರೀಮಂತರ ಭವನಗಳಲ್ಲೂ ಹೆಚ್ಚಿನ ಅಲಂಕರಣ ಕಂಡುಬರುತ್ತದೆ. ನಿಕ್ಕೊದಲ್ಲಿರುವ ಟೊಷೊಗು ಕಟ್ಟಡದಲ್ಲಿ ಈ ಅಲಂಕರಣದ ಅತಿರೇಕವನ್ನು ಕಾಣಬಹುದು. ಮೊದಲ ಟೋಕುಗಾವಾ ಶ್ರೀಮಂತ ಅಧಿಕಾರಿ ಅಯಯಾಸು ಸ್ಮಾರಕವೆಂದು ನಿರ್ಮಿಸಿದ ಈ ಮಂದಿರದ ವೈಭವವನ್ನು ಪರಾಕಾಷ್ಠೆಗೆ ಮುಟ್ಟಿಸಲು ದೇಶದ ಎಲ್ಲ ಭಾಗಗಳಿಂದಲೂ ವಾಸ್ತುಶಿಲ್ಪಿಗಳನ್ನೂ ಬಡಗಿಗಳನ್ನೂ ಕರೆಸಲಾಯಿತು. ಬೆಲೆಬಾಳುವ ಮರಮುಟ್ಟು ಮತ್ತು ಇತರ ಸಾಮಗ್ರಿಗಳನ್ನು ಆಯ್ದು ತರಲಾಯಿತು. ಇಷ್ಟಾದರೂ ಅತಿರೇಕದ ಅಲಂಕಾರ ತುಂಬಿರುವುದರಿಂದ ಮೊಮೊಯಮದ ವಾಸ್ತುಲಕ್ಷಣಗಳು ಕಾಣವಾಗಿವೆ. ವಾಸ್ತುಲಕ್ಷಣಗಳು ಪ್ರಮುಖವಾಗಿ ಎದ್ದು ಕಾಣುವ ಬದಲು ವಿವಿಧ ಬಣ್ಣಗಳಿಂದ ಚಿತ್ರತವಾದ ಕೆತ್ತನೆಗಳು ಪ್ರಧಾನವಾಗಿವೆ. ಸುಂದರವಾದ ದಟ್ಟ ಕಾಡಿನ ಮಧ್ಯೆ ಇದನ್ನು ನಿರ್ಮಿಸಲಾಗಿರುವುದರಿಂದ ಕಟ್ಟಡಗಳ ದಟ್ಟ ಬಣ್ಣಗಳು ಅತಿಯಾಗಿ ಎದ್ದುಕಾಣುವುದಿಲ್ಲವಾದರೂ ಜಪಾನೀ ವಾಸ್ತುಶೈಲಿಯ ಸರಳತೆ ಮತ್ತು ಸುರುಚಿ ಕಾಣವಾಗಿವೆ.

1868ರಲ್ಲಿ ಮೇಜಿ ಅಧಿಕಾರ ಬಂದ ಅನಂತರ ಜಪಾನಿನ ಜನಜೀವನದಲ್ಲಿ ಪಾಶ್ಚಾತ್ಯ ಪ್ರಭಾವಗಳು ಹೆಚ್ಚಿದುವು. ಪಾಶ್ಚಾತ್ಯ ವಾಸ್ತುಪದ್ಧತಿಗಳೂ ಸಾಮಗ್ರಿಗಳೂ ಸಾರ್ವಜನಿಕ ಕಟ್ಟಡಗಳ ನಿರ್ಮಾಣದಲ್ಲಿ ಬಳಕೆಗೆ ಬಂದುವು. ಪಾಶ್ಚಾತ್ಯ ವಾಸ್ತುಶಿಲ್ಪಿಗಳು ಜಪಾನೀ ಕಟ್ಟಡಗಳಿಗಾಗಿ ನಕ್ಷೆ ತಯಾರಿಸಿದರು. ಜಪಾನೀಯರಿಗೆ ತರಬೇತು ನೀಡಿದರು. ಪಾಶ್ಚಾತ್ಯ ಭವನಗಳ ಶೈಲಿಯ ಅನುಕರಣೆಯ ಜೊತೆಗೆ ಪಾಶ್ಚಾತ್ಯ ಹಾಗೂ ಪ್ರಾಚೀನ ಜಪಾನೀ ಶೈಲಿಯೂ ಸಂಮಿಶ್ರಣಗೊಂಡುವು. ಸಿಮೆಂಟು ಗಾರೆಗಳನ್ನು ಬಳಸಿ ಪ್ರಾಚೀನ ಜಪಾನೀ ಶೈಲಿಯ ಕಟ್ಟಡಗಳು ನಿರ್ಮಾಣವಾದುವು.

ಎರಡನೆಯ ಮಹಾಯುದ್ಧದ ತರುವಾಯದ ಜಪಾನೀ ವಾಸ್ತುಕಲೆಯ ಬೆಳವಣಿಗೆಯನ್ನು ಮೂರು ಹಂತಗಳನ್ನಾಗಿ ವಿಂಗಡಿಸಲಾಗಿದೆ. 1945 ರಿಂದ 1950ರ ವರೆಗಿನ ಮೊದಲ ಹಂತದಲ್ಲಿ ಆರ್ಥಿಕ ಮುಗ್ಗಟ್ಟು ಮತ್ತು ಸಾಮಗ್ರಿಗಳ ಕೊರತೆಯಿಂದ ಯಾವುದೇ ಹೊಸ ನಿರ್ಮಾಣಗಳು ಆಗಲಿಲ್ಲ. ಕೊರಿಯ ಯುದ್ಧ ಪ್ರಾರಂಭವಾದಾಗಿನಿಂದ ಜಪಾನಿನ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಕಟ್ಟಡಗಳ ನಿರ್ಮಾಣಕಾರ್ಯ ಭರದಿಂದ ಸಾಗಿತು. 1950-1955ರ ಕಾಲದಲ್ಲಿ ಪಾಶ್ಚಾತ್ಯ ವಾಸ್ತು ಕಲೆಯ ಮುನ್ನಡೆಯ ಅಂಶಗಳನ್ನು ಅಳವಡಿಸಿಕೊಳ್ಳಲಾಯಿತು. 1954ರ ವೇಳೆಗೆ ಹಿರೋಷಿಮದಲ್ಲಿ ಶಾಂತಿಕೇಂದ್ರ ಭವನವನ್ನು ನಿರ್ಮಿಸಿದ ಟಂಗೆಕೆಂಜೋ ವಿಶ್ವಖ್ಯಾತಿ ಗಳಿಸಿದರು. ಆ ವೇಳೆಗಾಗಲೇ ಖ್ಯಾತಿ ಪಡೆದಿದ್ದ ಹೊರಿಗುಚಿ ಸುಟಿಮಿ ಎಂಬ ಖ್ಯಾತ ವಾಸ್ತುಶಿಲ್ಪಿ ಪರಂಪರಾಗತ ಶೈಲಿಯಲ್ಲಿ ನಿರ್ಮಿಸಿದ ಹಷ್ಷೋಕನ್ ಹೋಟಲು ಕಟ್ಟಡ ಈ ಕಾಲದ ವಾಸ್ತುವಿನ ಒಂದು ಉತ್ತಮ ನಿದರ್ಶನ. ವಾಸ್ತುನಿರ್ಮಾಣ ಕ್ಷೇತ್ರದಲ್ಲಿ ಪ್ರಗತಿಸಾಧಿಸಿದ ಮತ್ತೊಬ್ಬ ಖ್ಯಾತ ಶಿಲ್ಪಿ ಮೇಕದ ಕುನಿಯೊ.
ಪಾಶ್ಚಾತ್ಯ ಮಾದರಿಯಲ್ಲಿ ಪರಿಪಕ್ವತೆ ಸಾಧಿಸಿದ ಜಪಾನೀ ವಾಸ್ತುಕಲೆ 1955ರ ಅನಂತರ ಸ್ವತಂತ್ರ ಮಾರ್ಗದಲ್ಲಿ ಮುಂದುವರಿದರೂ ಜಪಾನೀ ವಾಸ್ತುಶಿಲ್ಪಿಗಳು ತಮ್ಮದೇ ಆದ ಹೊಸ ಅಂಶಗಳನ್ನು ಅಳವಡಿಸಿಕೊಂಡು ವಿಶ್ವಖ್ಯಾತಿ ಗಳಿಸಿದರು. ಅದರ ಫಲವಾಗಿ 1960ರ ತರುವಾಯ ಜಪಾನೀ ವಾಸ್ತುಶಿಲ್ಪಿಗಳು ಅಮೆರಿಕ. ಯೂರೋಪುಗಳಲ್ಲಿ ಸಹ ವಾಸ್ತುನಿರ್ಮಾಣಕಾರ್ಯಗಳಿಗೆ ಸಲಹೆಗಾರರಾಗಿ ಹೋದರು.

1945ರ ವರೆಗೆ ವಾಸಗೃಹಗಳು ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣವಾಗುತ್ತಿದ್ದುವು. ಕೆಲವರು ಪಾಶ್ಚಾತ್ಯ ಶೈಲಿಯ ಭವನಗಳನ್ನು ಕಟ್ಟಿಸಿದರೆ ಮತ್ತೆ ಕೆಲವರು ತಮ್ಮ ಮನೆಗಳಿಗೆ ಪಾಶ್ಚಾತ್ಯ ಶೈಲಿಯ ಕೋಣೆಯನ್ನು ಸೇರಿಸಿ ಕೊಳ್ಳುತ್ತಿದ್ದರು. ಹಳೆಯ ಮಾದರಿಯ ಗೃಹಗಳಲ್ಲಿ ಹೊರಭಾಗದಲ್ಲಿ ಹೊಸದಾಗಿ ಗಾಜಿನ ಕಿಟಕಿಗಳನ್ನು ಅಳವಡಿಸಲಾಯಿತು. ವಿದ್ಯುದ್ದೀಪ, ಕೊಳಾಯಿ ಮೊದಲಾದ ಆಧುನಿಕ ಸೌಲಭ್ಯಗಳು ಸಜ್ಜುಗೊಂಡುವು. ಯುದ್ಧಾನಂತರ ಕಾಲದಲ್ಲಿ ಕಾಂಕ್ರೀಟಿನ ಕಟ್ಟಡಗಳು ಹೆಚ್ಚು ಹೆಚ್ಚಾಗಿ ನಿರ್ಮಾಣವಾದರೂ ಅವುಗಳಲ್ಲಿ ಚಾರುಬಾಗಿಲು, ಕಿಟಕಿಗಳನ್ನು ನಿರ್ಮಿಸಲಾಗುತ್ತಿತ್ತು. ಹಳೆಯ-ಹೊಸ ಪದ್ಧತಿಗಳ ಸಮ್ಮಿಲನದ ಈ ಜೀವನ ರೀತಿಯಲ್ಲಿ 1960ರ ವರೆಗೆ ಕುರ್ಚಿಗಳ ಉಪಯೋಗ ಸಹ ಇರಲಿಲ್ಲ. ವಾಸ್ತುನಿರ್ಮಾಣಗಳ ಹೊರನೋಟದಲ್ಲಿ ಸಾಂಪ್ರದಾಯಿಕತೆ ಕಣ್ಮರೆಯಾಗುತ್ತಿದ್ದರೂ ಒಳ ವ್ಯವಸ್ಥೆಯಲ್ಲಿ ಬದಲಾವಣೆಗಳು ಬಹಳಷ್ಟು ನಿಧಾನವಾಗಿ ನಡೆಯುತ್ತಿವೆ. ಆದರೂ ಪಾಶ್ಚಾತ್ಯ ಜನಜೀವನ ಪದ್ಧತಿ ಕ್ರಮೇಣ ತನ್ನ ಆಕ್ರಮಣ ನಡೆಸುತ್ತಿರುವುದರಿಂದ ಮನೆಗಳ ಒಳಭಾಗಗಳಲ್ಲೂ ಸೂಕ್ತಬದಲಾವಣೆ ಆವಶ್ಯಕವೆನಿಸುತ್ತಿದೆ. ಆದರೂ ಹಲವಾರು ಪ್ರಾಚೀನ ಸಂಪ್ರದಾಯಗಳು ಶಾಶ್ವತವಾಗಿ ಉಳಿದುಬರುವಂತೆ ತೋರುತ್ತದೆ.
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ